ದ.ಕ.ಮಾದರಿಯಲ್ಲಿ ರಾಜ್ಯದೆಲ್ಲೆಡೆ ಕಡತ ಅಭಿಯಾನ: ಆರ್.ಅಶೋಕ್

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯಲ್ಲಿಯೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಡತ ವಿಲೇವಾರಿ ಅಭಿಯಾನ ನಡೆಸಲಾಗುವುದು. ತಾನು ಖುದ್ದಾಗಿ ಅಭಿಯಾನದಲ್ಲಿ ಭಾಗವಹಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕಡತ ವಿಲೇವಾರಿ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭ ಸಾಂಕೇತಿಕವಾಗಿ ಕಡತ ವಿಲೇವಾರಿ ನಡೆಸಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಹಸ್ತಾಂತರಿಸಲಾಯಿತು.
ಜನತೆಯ ಯಾವುದೇ ಅರ್ಜಿಗಳು ಧೀರ್ಘಕಾಲ ಪೆಂಡಿಂಗ್ ಉಳಿಯಬಾರದು ಎಂಬ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನೂ ನೀಡಲಾಗಿದೆ. ಪೆಂಡಿಂಗ್ ಇರುವ ಪಿಂಚಣಿ ಸಮಸ್ಯೆಯನ್ನು ಕೂಡ ಶೀಘ್ರ ಬಗೆಹರಿಸಲಾಗುವುದು. ಜನರ ಸಮಸ್ಯೆ ಬಗೆಹರಿಸಲೆಂದೇ ಎಲ್ಲಾ ಜಿಲ್ಲೆಗಳಲ್ಲಿ ಸ್ವತಃ ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗಕ್ಕೆ ತೆರಳಿ ಜನತೆಯ ಸಮಸ್ಯೆ ಆಲಿಸಿ ಸ್ಪಂದಿಸುತ್ತಿದ್ದಾರೆ. ಯುವುದೇ ಸಿಂಗಲ್ ಅರ್ಜಿ ಪೆಂಡಿಂಗ್ ಉಳಿಯದಂತೆ ಒತ್ತು ನೀಡಲಾಗಿದೆ ಎಂದು ಆರ್.ಅಶೋಕ್ ಹೇಳಿದರು.
ಕುಮ್ಕಿ, ಕಾನ, ಬಾಣೆ ಇತ್ಯಾದಿ ಸಮಸ್ಯೆ ಸರಿಪಡಿಸಲು ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕುಮ್ಕಿ ಜಮೀನು ಸಂಘ ಸಂಸ್ಥೆಗಳಿಗೆ ನೀಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಈ ಜಮೀನನ್ನು ರೈತರಿಗೆ ನೀಡಿ ನ್ಯಾಯ ಒದಗಿಸಲಾಗುವುದು ಎಂದವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!