ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ದೆಹಲಿಯ ತಾಜ್‌ಮಾನ್ ಸಿಂಗ್ ಹೊಟೇಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ನೀರು ಹರಿಸಲು ಆದೇಶಿಸಿದ್ದು, ರಾಜ್ಯದಲ್ಲಿ ಎದುರಾಗಿರುವ ನೀರಿನ ಅಭಾವದಿಂದ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ವೇಳೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಳೆಯ ಅಭಾವದಿಂದ ನಾವು ತೊಂದರೆಯಲ್ಲಿದ್ದೇವೆ. ಎರಡೂ ರಾಜ್ಯಗಳ ನಾಯಕರನ್ನು ಪ್ರಧಾನಿ ಕರೆದು ಮಾತಾಡಬೇಕು. ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿಗೆ ಸಮಯ ಕೇಳಲಾಗಿದೆ. ನಾಳೆ ಸುಪ್ರೀಂಕೋರ್ಟ್‌ಗೆ ನೀರು ಇಲ್ಲವೆಂದು ಅರ್ಜಿ ಸಲ್ಲಿಸುತ್ತೇವೆ ಎಂದು ಸಿಎಂ ಹೇಳಿದರು.
ಈ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಒಬ್ಬರನ್ನು ಹೊರತುಪಡಿಸಿ ರಾಜ್ಯದಿಂದ ಆಯ್ಕೆಯಾದ ಎಲ್ಲಾ ಸಂಸದರು, ಕೇಂದ್ರ ಸಚಿವರು ಹಾಜರಿದ್ದರು.