ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ನನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ ಸುರೇಶ್ ತಿಳಿಸಿದ್ದಾರೆ.
ಫಿಲ್ಮ್ ಚೇಂಬರ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ಇದ್ದಾಗ ನಾವು ಎಂಟ್ರಿ ಆಗಲು ಆಗುವುದಿಲ್ಲ. 2011 ರಲ್ಲಿ ಸರಿದೂಗಿಸಿದ್ದೆವು. ಅದು ಕುಟುಂಬದ ವಿಚಾರವಾಗಿತ್ತು. ಈಗ ನಾವು ಎಂಟ್ರಿಯಾಗಲು ಸಾಧ್ಯವಿಲ್ಲ. ಕಾನೂನಿನ ತೀರ್ಪು ಬಂದಾಗ ಕೂಡಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ದರ್ಶನ್ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಐದಾರು ತಿಂಗಳು ದರ್ಶನ್ ಪ್ರಕರಣದಿಂದ ಹೊರ ಬರಲು ಸಾಧ್ಯವಿಲ್ಲ. ಮುಂದೆ ಸಿನಿಮಾಗಳೂ ಘೋಷಣೆ ಆಗಿದೆ. ಕೆಲವರು ಅಡ್ವಾನ್ಸ್ ಕೊಟ್ಟಿದ್ದಾರೆ. ಹೀಗಾಗಿ ಬ್ಯಾನ್ ಅಷ್ಟು ಸುಲಭವಲ್ಲ. ನಾವು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಆದ್ರೆ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಪ್ರಚೋದನೆಗೊಳಿಸುವ ಕಾಮೆಂಟ್ಸ್ ಹಾಗೂ ಸ್ಟೇಟಸ್ ಹಾಕೋದನ್ನು ನಿಲ್ಲಿಸಬೇಕು. ಇದರಿಂದ ಏನಾಗುತ್ತೆ ನೋಡ್ತಿದ್ದೀರಿ. ಫ್ಯಾನ್ಸ್‍ಗಳು ಇಂತಹ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ, ಹತ್ಯೆಗೀಡಾದ ರೇಣುಕಾಸ್ವಾಮಿ ಮನೆಗೆ ಜೂ.14 ರಂದು ಫಿಲ್ಮ್ ಚೇಂಬರ್ ನ ಸದಸ್ಯರು ಭೇಟಿ ನೀಡಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.