October 10, 2026
Saturday, October 10, 2026
spot_img

CINE | KGF 2, RRR ದಾಖಲೆ ಪುಡಿಪುಡಿ: ‘ಧುರಂಧರ್’ ನಾಗಾಲೋಟಕ್ಕೆ ಈಗ ಅಕ್ಷಯ್ ಕುಮಾರ್ ಅಡ್ಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿತ್ತು. ಬಿಡುಗಡೆಯಾದ ನಾಲ್ಕು ವಾರಗಳ ಕಾಲ ಅಡೆತಡೆಯಿಲ್ಲದೆ ಮುನ್ನುಗ್ಗುತ್ತಿದ್ದ ಈ ಸ್ಪೈ ಥ್ರಿಲ್ಲರ್ ಈಗ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಅಬ್ಬರಕ್ಕೆ ಸ್ವಲ್ಪ ತತ್ತರಿಸಿದಂತೆ ಕಾಣುತ್ತಿದೆ.

ಭಾರತೀಯ ಚಿತ್ರರಂಗದ ದೈತ್ಯ ಸಿನಿಮಾಗಳ ದಾಖಲೆಗಳನ್ನು ಧೂಳೀಪಟ ಮಾಡಿರುವ ಈ ಸಿನಿಮಾ, Sacnilk ವರದಿಯ ಪ್ರಕಾರ ಭಾರತದಲ್ಲಿ ಬರೋಬ್ಬರಿ 1110.47 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ 1000 ಕೋಟಿ ಕ್ಲಬ್ ಸೇರಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಐತಿಹಾಸಿಕ ಸಾಧನೆ ಮಾಡಿದೆ.

‘ಧುರಂಧರ್ 2’ ಅಳಿಸಿಹಾಕಿದ ಪ್ರಮುಖ ದಾಖಲೆಗಳು:

ಕೆಜಿಎಫ್: ಚಾಪ್ಟರ್ 2 (859.70 ಕೋಟಿ)

ಆರ್​ಆರ್​ಆರ್ (782.20 ಕೋಟಿ)

ಕಲ್ಕಿ 2898 ಎಡಿ (646 ಕೋಟಿ)

ಜೊತೆಗೆ ಜವಾನ್, ಪಠಾಣ್ ಮತ್ತು ಅನಿಮಲ್ ಚಿತ್ರಗಳ ದಾಖಲೆಗಳೂ ಮುರಿದಿವೆ.

ಸತತ ನಾಲ್ಕು ವಾರಗಳ ವಿಜಯಯಾತ್ರೆಗೆ ಈಗ ಅಕ್ಷಯ್ ಕುಮಾರ್ ಮತ್ತು ಟಬು ಜೋಡಿಯ ಹಾರರ್-ಕಾಮಿಡಿ ‘ಭೂತ್ ಬಂಗ್ಲ’ ಅಡ್ಡಿಯಾಗಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಭರ್ಜರಿ ಓಪನಿಂಗ್ ಪಡೆದ ಈ ಚಿತ್ರದಿಂದಾಗಿ ‘ಧುರಂಧರ್ 2’ ಗಳಿಕೆ ಕುಸಿದಿದೆ. ಶನಿವಾರ ‘ಭೂತ್ ಬಂಗ್ಲ’ 15 ಕೋಟಿ ಗಳಿಸಿದರೆ, ‘ಧುರಂಧರ್ 2’ ಕೇವಲ 4.65 ಕೋಟಿಗೆ ತೃಪ್ತಿಪಡಬೇಕಾಯಿತು.

ಮುಂದಿನ ದಿನಗಳಲ್ಲಿ ‘ಭೂತ್ ಬಂಗ್ಲ’ ಕ್ರೇಜ್ ಹೆಚ್ಚಾದರೆ ‘ಧುರಂಧರ್ 2’ ಪ್ರದರ್ಶನ ಕಾಣುವ ಥಿಯೇಟರ್‌ಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.

Must Read