ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜ್ಯದ ಮೂರು ಪ್ರಮುಖ ನಗರಗಳಾದ ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಬೆಳಗಾವಿಗೆ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ನಾಮಕರಣ ಮಾಡಬೇಕು ಎಂಬುದರ ಕುರಿತು ಒಟ್ಟಿಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಮ್ಮ ನೆಚ್ಚಿನ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆನ್ನುವ ಬೇಡಿಕೆಯಿತ್ತು. ಈ ಕುರಿತು ತೀರ್ಮಾನ ಕೈಗೊಂಡಿದ್ದಾಗ ಯಡಿಯೂರಪ್ಪನವರು, ತಮ್ಮ ಹೆಸರು ಬೇಡ ಎಂದು ಹೇಳಿದ್ದರು. ಇತ್ತೀಚೆಗೆ ಶಿವಮೊಗ್ಗ ಹೋಗಿದ್ದಾಗ ಸಾರ್ವಜನಿಕರಿಂದ ಮತ್ತೆ ಒತ್ತಡ ಬಂದಿತ್ತು. ಹಿಂದಿನ ಮಾತನ್ನು ಮತ್ತೊಮ್ಮೆ ಅವರು ಪುನರುಚ್ಚರಿಸಿದ್ದಾರೆ. ಯಾರ ಹೆಸರು ಇಡಬೇಕೆನ್ನುವ ಕುರಿತು ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನನ್ನ ಪ್ರಕಾರ ನಮ್ಮದು ಪ್ರಧಾನಿ ಮೋದಿಯವರ ಸಂಸ್ಕೃತಿಯಾಗಿದೆ. ಭಾರತ ಹಿಂದೆಂದೂ ಕಾಣದ ರೀತಿಯಲ್ಲಿ ಭಾರತವನ್ನು ಶಸಕ್ತವಾಗಿ, ಶ್ರೀಮಂತವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾನಂತರ ಈಗ ಬಂದಿದೆ. ಇಡೀ ಜಗತ್ತಿನಲ್ಲಿ ಭಾರತವನ್ನು ಸರ್ವಶ್ರೇಷ್ಠ ದೇಶವನ್ನಾಗಿ ಮಾಡುವ ಧ್ಯೇಯ ಇಟ್ಟುಕೊಂಡು ನಾವು ಸಾಗುತ್ತಿದ್ದೇವೆ. ಯಾರ್ಯಾರದ್ದು ಯಾವ್ಯಾವ ಸಂಸ್ಕೃತಿ ಎನ್ನುವುದು ನಾಡಿನ ಜನತೆಗೆ ತಿಳಿದಿದೆ ಎಂದರು.