ಹೊಸದಿಗಂತ ವರದಿ, ವಿಜಯಪುರ:
ಹುಡುಗಿಯೊಬ್ಬಳನ್ನು ಚುಡಾಯಿಸಿದಕ್ಕೆ ಇಬ್ಬರು ಯುವಕರಿಗೆ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿರುವ ಘಟನೆ ವಿಜಯಪುರ ತಾಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದ ಬಳಿಯ ಬಸವ ನಗರದಲ್ಲಿ ನಡೆದಿದೆ.
ತೇಜು ಚವ್ಹಾಣ, ರಾಜು ಚವ್ಹಾಣ ಎಂಬುವರ ಕೇಶ ಮುಂಡನೆ ಮಾಡಲಾಗಿದೆ.
ಶಾಸಕ ದೇವಾನಂದ ಚವ್ಹಾಣ ಕ್ಷೇತ್ರದಲ್ಲಿ ಹೆಗಡಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಸಿಂಗ್ ಹಾಗೂ ತಾಂಡಾದ ಮುಖ್ಯಸ್ಥರ ಸಮ್ಮುಖದಲ್ಲಿ ತಲೆ ಬೋಳಿಸಿ ತಲೆಗೆ ಸುಣ್ಣ ಬಳಿದು ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದರು.
ಹೀಗಾಗಿ ಸ್ಥಳೀಯರು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ವಿವರ: ಮಹಾರಾಷ್ಟ್ರದಲ್ಲಿ ಓರ್ವ ಹುಡುಗಿ ವಿಚಾರಕ್ಕೆ ಗಲಾಟೆ ಆಗಿದೆ. ಹೀಗಾಗಿ ಹಿರಿಯರ ಸಮ್ಮುಖದಲ್ಲಿ ಈ ಇಬ್ಬರ ಕೇಶ ಮುಂಡನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.