ಕಾಶಿ ಯಾತ್ರೆಗೆ ಅಂತಿಮ ಮಾರ್ಗಸೂಚಿ ರೆಡಿ: ಈ ದಾಖಲೆಗಳು ಅತೀ ಮುಖ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದ ಜನತೆ ಕಾಶಿ ಕಾರೀಡಾರ್​​ಗೆ ಭೇಟಿ ನೀಡುವ ಉದ್ದೇಶದಿಂದ ಬಜೆಟ್ ನಲ್ಲಿ ಘೋಷಿಸಲಾಗಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕಾಶಿ ಯಾತ್ರೆಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಸರ್ಕಾರ ಅಂತಿಮ ಆದೇಶ ಹೊರಡಿಸಿದೆ.
ಏಪ್ರಿಲ್‌ 1, 2022ಕ್ಕೆ ಪೂರ್ವಾನ್ವಯವಾಗುವಂತೆ ಆದೇಶವನ್ನು ಹೊರಡಿಸಲಾಗಿದ್ದು, ಸೂಕ್ತ ದಾಖಲಾತಿಗಳೊಂದಿಗೆ ಜನರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಮಾರ್ಗಸೂಚಿಯಲ್ಲೇನಿದೆ?

  • ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ ರೂ 5,000/- ಸಹಾಯ ಧನ
  • ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನಸಹಾಯ ಸೌಲಭ್ಯ ಪಡೆಯಲು ಅರ್ಹ.
  • ಇದಕ್ಕಾಗಿ ಯಾವುದಾದರೂ ಒಂದು ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್‌ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್
  • ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್‌ 1 ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರಬೇಕು. (18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲಾತಿ ಹಾಜರುಪಡಿಸಬೇಕು)
  • ಏಪ್ರಿಲ್ 1ರಿಂದ ಜೂನ್ 30ರವರೆಗೆ ಕಾಶಿ ಶ್ರೀ ವಿಶ್ವನಾಥ ಸ್ವಾಮಿಯ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಬಂಧಿಸಿದ ದಾಖಲಾತಿ (ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಮತ್ತು ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೆಟ್, ಛಾಯಾಚಿತ್ರ ಪೂಜಾ ರಶೀದಿ ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ಇತರೆ ದಾಖಲೆ)ಗಳನ್ನು ಖುದ್ದಾಗಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಇವರ ಕಚೇರಿಗೆ ಸಲ್ಲಿಸಬೇಕು.
  • ಜುಲೈ 1ರಿಂದ ಅನ್ವಯವಾಗುವಂತೆ ಯಾತ್ರಾರ್ಥಿಗಳು ಕಾಶಿ ಯಾತ್ರೆ ಕೈಗೊಂಡಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಛತ್ರ, ವಾರಾಣಸಿ ಇವರ ಕಚೇರಿಯಿಂದ ಬಯೋಮೆಟ್ರಿಕ್‌ ದೃಢೀಕರಣದೊಂದಿಗೆ, ಆನ್‌ಲೈನ್‌ ಅಥವಾ ಮುದ್ಧಾಂ/ನೊಂದಾಯಿತ ಅಂಚೆ ಮೂಲಕ, ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಕಚೇರಿಗೆ ಸಲ್ಲಿಸಬೇಕು. ಒಂದು ವೇಳೆ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಛತ್ರ, ವಾರಾಣಸಿ ಇವರ ದೃಢೀಕರಣ ಇಲ್ಲದಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
    ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ.
  • ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್‌ ಖಾತೆಯು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು ಮತ್ತು ಕಡ್ಡಾಯವಾಗಿ ಆಧಾರ್ ಲಿಂಕ್‌ ಆಗಿರಬೇಕು.
  • ಸದರಿ ಸಹಾಯಧನವನ್ನು ಯಾತ್ರೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ದಾಖಲೆಗಳನ್ನು ನಿಗಧಿತ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಒದಗಿಸಿದ ನಂತರ ಸದರಿ ಅರ್ಜಿಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ, ಪರಿಶಿಲಿಸಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು

ಕಾಶಿಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ:

ಭಾರತ್‌ ಗೌರವ್‌ ಯೋಜನೆ ಅಡಿಯಲ್ಲಿ ಕಾಶಿ ಯಾತ್ರೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಭಾರತ ಗೌರವ ಯೋಜನೆಯ ಅಡಿಯಲ್ಲಿ ಮುಜರಾಯಿ ಇಲಾಖೆಯ ರೈಲ್ವೇ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಾಶಿಗೆ ವಿಶೇಷ ರೈಲಿನ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!