BIG NEWS | ಕೊನೆಗೂ ʻಗೆದ್ದʼರಾಮಯ್ಯ: ಸಿಎಂ ಗಾದಿ ಸಿದ್ದು ‘ಕೈ’ಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಚುಕ್ಕಾಣಿ ಹಿಡಿಯುವ ನಾಯಕ ಯಾರು ಎಂಬ ಪ್ರಶ್ನೆಗೆ ಕಡೆಗೂ ಉತ್ತರ ದೊರಕಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದ್ದಾರೆ.

ರಾಜ್ಯದ ಗದ್ದುಗೆ ಏರಲು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಇಬ್ಬರು ನಾಯಕರು ತಾವೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಇಬ್ಬರು ನಾಯಕರನ್ನು ಹೈ ದೆಹಲಿಗೆ ಕರೆಸಿಕೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಸುತ್ತಿನ ಸಭೆಯನ್ನು ನಡೆಸಿದ್ದರು.

ಆದರೆ ಇಲ್ಲಿ ಯಾವ ನಾಯಕರ ಮನವನ್ನು ಒಲಿಸಲಾಗಲಿಲ್ಲ. ಇಬ್ಬರೂ ತಮ್ಮ ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಇಟ್ಟಿದ್ದರು. ಡಿಕೆಶಿ ತಾನು ಸಿಎಂ ಆಗಬೇಕು, ಇಲ್ಲವೇ ಸರ್ಕಾರದ ಕೆಲಸಗಳಲ್ಲಿ ಭಾಗಿಯಾಗೋದಿಲ್ಲ ಶಾಸಕನಾಗಿ ಮುಂದುವರಿಯುವೆ ಎಂದಿದ್ದರು. ಇನ್ನು ಸಿದ್ದರಾಮಯ್ಯ ಪೂರ್ಣಪ್ರಮಾಣದ ಸಿಎಂ ಆಗುವ ಅವಕಾಶ ನೀಡಿದರೆ ಮಾತ್ರ ಸ್ಥಾನ ಅಲಂಕರಿಸುವೆ ಎಂದಿದ್ದರು. ದೆಹಲಿಯಲ್ಲಿ ನಿನ್ನೆಯಿಡೀ ಹೈಡ್ರಾಮಾ ನಡೆದರೂ ಸಿಎಂ ಯಾರು ಅನ್ನೋ ವಿಷಯ ಮಾತ್ರ ಕಗ್ಗಂಟಾಗಿಯೇ ಉಳಿದಿತ್ತು.

ನಿನ್ನೆ ಮಧ್ಯರಾತ್ರಿ ಸಿದ್ದರಾಮಯ್ಯ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಸಭೆ ನಡೆಸಿದ್ದರು.ಇದಾದ ನಂತರ ಡಿಕೆಶಿ ಜೊತೆ ಸುರ್ಜೇವಾಲಾ ಮೀಟಿಂಗ್ ನಡೆಸಿದ್ದು, ನಂತರ ಖರ್ಗೆ ನಿವಾಸಕ್ಕೆ ಬಂದಿದ್ದರು. ಈ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡ ಭಾಗಿಯಾಗಿದ್ದರು.

ಈ ಸಭೆಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರ ಮನವನ್ನು ಒಲಿಸಲಾಗಿದ್ದು, ಬೈ ಟು ಆಳ್ವಿಕೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ಇಬ್ಬರೂ ಎರಡೂವರೆ ವರ್ಷದ ಆಡಳಿತ ನಡೆಸಲಿದ್ದು, ಮೊದಲಿಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ.

ಮೇ.20ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಲ್ಲಿ ಎಲ್ಲ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!