Sunday, October 1, 2023

Latest Posts

ಫಿನ್ಲೆಂಡ್‌ ಪ್ರಧಾನಿಯ ಖಾಸಗಿ ಪಾರ್ಟಿ ವಿಡಿಯೋ ವೈರಲ್‌: ಸನ್ನಾಗೆ ಮುಜುಗರ, ವಿಪಕ್ಷಗಳಿಗೆ ಟೀಕಾಸ್ತ್ರವಾದ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 36ರ ಹರೆಯದ ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್‌ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ್ದು,  ಆ ಬಳಿಕ ಮರಿನ್ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಕೆಲ ನಾಯಕರು ಆಕೆ ಡ್ರಗ್ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸುತ್ತಿದ್ದಾರೆ.
ಖಾಸಗಿ ನಿವಾಸದಲ್ಲಿ ಚಿತ್ರೀಕರಿಸಿದ ವೈರಲ್‌ ವಿಡಿಯೋದಲ್ಲಿ ಸನ್ನಾ ತಮ್ಮ ಸ್ನೇಹಿತರೊಂದಿಗೆ ಮಧ್ಯ ಸೇವಿಸುತ್ತಾ ಪಾಪ್‌ ಹಾಡಿಗೆ ಚಿತ್ರವಿಚಿತ್ರವಾಗಿ ಕುಣಿಯುತ್ತಿದ್ದಾರೆ. ಆಕೆಯ ಜೊತೆಗೆ ಇನ್ನೂ ಐದು ಮಂದಿ ಇದ್ದಾರೆ. ಗಾಯಕ ಅಲ್ಮಾ, ಟಿವಿ ಹೋಸ್ಟ್ ಟಿನ್ನಿ ವಿಕ್ಸ್‌ಟ್ರೋಮ್ ಮತ್ತು ಯೂಟ್ಯೂಬರ್ ಇಲೋನಾ ಯ್ಲಿಕೋರ್ಪಿ ಸೇರಿದಂತೆ ಹಲವಾರು ಪ್ರಮುಖ ಫಿನ್ನಿಷ್ ಸಾರ್ವಜನಿಕ ವ್ಯಕ್ತಿಗಳು ಈ ವೀಡಿಯೊದಲ್ಲಿದ್ದಾರೆ.  ಈ ವಿಡಿಯೋಕ್ಕೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮರಿನ್ ಬೆಂಬಲಕ್ಕೆ ಬಂದರೆ, ಕೆಲವರು ದೇಶದಲ್ಲಿ ಅವರ ಸ್ಥಾನವನ್ನು ಉಲ್ಲೇಖಿಸಿ ಆಕೆಯ ನಡವಳಿಕೆಯನ್ನು ಟೀಕಿಸಿದ್ದಾರೆ. ಯುವ ಪ್ರಧಾನಿ ಪಾರ್ಟಿಗಾಗಿ ಟೀಕೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೊರೋನಾ ಸೋಂಕಿಗೆ ಒಳಗಾಗಿದ್ದರೂ ನೈಟ್‌ಕ್ಲಬ್‌ಗೆ ಪಾರ್ಟಿಗೆ ಹೋಗಿದ್ದಕ್ಕಾಗಿ ಅವರು ಟೀಕೆಗೆ ಒಳಗಾಗಿದ್ದರು. ಮಾಜಿ ಹಿಟ್‌ಮ್ಯಾನ್ ಜಾನ್ನೆ ರಾನಿನೆನ್ ಜೊತೆಗಿನ ಆಕೆಯ ಛಾಯಾಚಿತ್ರವೂ ವಿವಾದದ ಬಿರುಗಾಳಿ ಎಬ್ಬಿಸಿತು.

ಏತನ್ಮಧ್ಯೆ, ವಿರೋಧ ಪಕ್ಷದ ನಾಯಕಿ ರಿಕಾ ಪುರ್ರಾ ಅವರು ಮರಿನ್‌ಗೆ ಡ್ರಗ್ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಕರೆ ನೀಡಿದ್ದಾರೆ.  ಮಾದಕವಸ್ತು ಸೇವನೆಯ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಸನ್ನಾ ಮರೀನ್‌, ಅಗತ್ಯವಿದ್ದರೆ ಡ್ರಗ್ಸ್‌ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ಧ ಎಂದು ಘೋಷಿಸಿದ್ದಾರೆ. “ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ’ ಎಂದು ಮರೀನ್‌ ಹೇಳಿದ್ದಾರೆ.
ಕೆಲ ಸಾರ್ವಜನಿಕರು ಆಕೆಯ ಬೆಂಬಲಕ್ಕೆ ಬಂದಿದ್ದು, ನಾಯಕರೊಬ್ಬರು ತಮ್ಮ ಬಿಡುವಿನ ವೇಳೆಯನ್ನು ಸ್ನೇಹಿತರೊಂದಿಗೆ ಕಳೆಯುವುದರಲ್ಲಿ ಅಥವಾ ಮೋಜು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. 2015ರಲ್ಲಿ ಸಂಸದೆಯಾಗಿ ಆಯ್ಕೆಯಾಗಿದ್ದ ಸನ್ನಾ, 2019 ರಲ್ಲಿ ಫಿನ್ಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಉಕ್ರೇನ್‌ನ ಮೇಲಿನ ರಷ್ಯಾದ ಯುದ್ಧದ ವಿರುದ್ಧದ ಅವರ ಬಲವಾದ ನಿಲುವು ಮತ್ತು NATO ಗೆ ಸೇರಲು ಫಿನ್‌ಲ್ಯಾಂಡ್‌ನ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಅವರನ್ನು ಪ್ರಶಂಸಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!