ರಾಮನಗರ ವಕೀಲರ ಸಂಘದ 40 ಮಂದಿ ವಿರುದ್ಧ ಎಫ್‌ಐಆರ್: ಚಿತ್ರದುರ್ಗದಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ,ಚಿತ್ರದುರ್ಗ :

ಸುಳ್ಳು ದೂರಿನ ಮೇರೆಗೆ ರಾಮನಗರ ಐಜೂರು ಪೊಲೀಸರು ವಕೀಲರ ಸಂಘದ ೪೦ ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ವತಿಯಿಂದ ಸೋಮವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ನ್ಯಾಯಾಲಯದ ಆವರಣದಿಂದ ಹೊರಟ ವಕೀಲರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ ನಗರದ ವಕೀಲರ ಸಂಘದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆದು ಸಂಘದ ಹಿರಿಯ ಕಿರಿಯ ಮಹಿಳಾ ವಕೀಲರುಗಳಿಂದ ಅವಹಾಲನ್ನು ಪಡೆದು ಸಂಘವು ಸದರಿ ಐಜೂರು ಪೊಲೀಸ್ ಠಾಣಾಧಿಕಾರಿಯಾದ ಸೈಯದ್ ತನ್ವೀರ್ ಹುಸೇನ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಬಳಿಕ ರಾಮನಗರ ವಕೀಲದ ಸಂಘದ ೪೦ ಜನ ವಕೀಲರ ವಿರುದ್ಧ ಸುಳ್ಳು ಕೇಸು ದಾಖಲು ಮಾಡಿರುವ ಐಜೂರು ಪೊಲೀಸ್ ಠಾಣಾಧಿಕಾರಿ ಸೈಯದ್ ತನ್ವೀರ್ ಹುಸೇನ್ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ರಾಮನಗರ ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣಾಧಿಕಾರಿ ಸೈಯದ್ ತನ್ವೀರ್ ಹುಸೇನ್ ಅವರನ್ನು ಅಮಾನತ್ತು ಮಾಡುವಂತೆ ರಾಮನಗರ ಜಿಲ್ಲಾ ವಕೀಲರ ಸಂಘವು ನಿರಂತರವಾಗಿ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ತೊಂದರೆ ನೀಡದಂತೆ ಶಾಂತಿಯುತವಾಗಿ ಸಂಘದ ಆವರಣದಲ್ಲಿ ಧರಣಿ ನಡೆಸುತ್ತಿದೆ. ರಾಮನಗರ ವಕೀಲರ ಸಂಘದ ಹೋರಾಟಕ್ಕೆ ೧೯೩ ರಾಜ್ಯದ ವಕೀಲರ ಸಂಘಗಳು ಮನವಿ ಸಲ್ಲಿಸಿ ಸದರಿ ಘಟನೆಗೆ ಕಾರಣರಾದ ಠಾಣಾಧಿಕಾರಿಯ ವಿರುದ್ಧ ತನಿಖೆ ನಡೆಸಿ ಅಮಾನತ್ತುಗೊಳಿಸಬೇಕೆಂದು ಮನವಿ ಮಾಡಿದ್ದರು. ಆದಾಗ್ಯೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಐಜೂರು ಪೊಲೀಸ್ ಠಾಣಾಧಿಕಾರಿ ಸೈಯದ್ ತನ್ವೀರ್ ಹುಸೇನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಕುರಿರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಕ್ರಮ ಜರುಗಿಸಿಲ್ಲ. ಇದನ್ನು ವಿರೋಧಿಸಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ಸದರಿ ತಪ್ಪಿತಸ್ಥ ಐಜೂರು ಪೊಲೀಸ್ ಠಾಣಾಧಿಕಾರಿಯಾದ ಸೈಯದ್ ತನ್ನೀರ್ ಹುಸೇನ್ ಅವರನ್ನು ಈ ತಕ್ಷಣದಿಂದಲೇ ಜಾರಿ ಬರುವಂತೆ ಅಮಾನತ್ತು ಪಡಿಸಲು ಒತ್ತಾಯಿಸಿತು.

ರಾಮನಗರ ವಕೀಲರ ಸಂಘದ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ದಬ್ಬಾಳಿಕೆ ನಡೆಸಲಾಗಿದೆ. ಹೀಗೆ ವಕೀಲರ ಸಂಘದ ಕಚೇರಿ ಪ್ರವೇಶಿಸಿದ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದ ಜನರು ವಕೀಲರ ಸಂಘದವರಿಗೆ ಬೆದರಿಕೆ ಹಾಕಿದ್ದಾರೆ. ಇಂತಹ ದುಂಡಾ ವರ್ತನೆ ತೋರಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾನಿರತ ವಕೀಲರು ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಟಿ.ತಿಪ್ಪೇಸ್ವಾಮಿ. ಉಪಾಧ್ಯಕ್ಷ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ, ಖಂಜಾಚಿ ಪ್ರದೀಪ್, ಜಂಟಿ ಕಾರ್ಯದರ್ಶಿ ಗಿರೀಶ್, ಸದಸ್ಯರಾದ ದಾಸಪ್ಪ, ಸುರೇಶ್, ಮಹಮ್ಮದ್ ಇಮ್ರಾನ್, ಹರೀಶ್, ರಾಜೀವ್, ಧನಂಜಯ, ವರುಣ, ರವಿ ಸೇರಿದಂತೆ ಮಹಿಳಾ ನ್ಯಾಯಾವಾದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!