ಜೆರೋಸಾ ಶಾಲಾ ಪ್ರಕರಣ: ಶಾಸಕರು, ವಿಹಿಂಪ ಮುಖಂಡರ ಮೇಲಿನ FIR ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ನಗರದ ವೆಲೆನ್ಸಿಯಾದ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನವನ್ನು ವಿರೋಧಿಸಿದ ಕಾರಣಕ್ಕೆ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಹಾಗೂ ಪಾಲಿಕೆ ಸದಸ್ಯರಿಬ್ಬರ ಮೇಲೆ ದಾಖಲಿಸಿರುವ ಸುಳ್ಳು ಕೇಸನ್ನು ಹಿಂಪಡೆಯಬೇಕು ಮತ್ತು ಜೆರೋಸಾ ಸಂಸ್ಥೆಯ ಶಿಕ್ಷಕಿ ಪ್ರಭಾ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ದಕ್ಷಿಣ ಮಂಡಲದ ವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್, ಕಾಂಗ್ರೆಸ್‌ನ ರಾಜಕೀಯ ದಂಗಲ್‌ಗೆ ಬಿಜೆಪಿ ಹೆದರುವುದಿಲ್ಲ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ದೊರೆಯಲಿದೆ. ಕಾಂಗ್ರೆಸ್ ಕಂಗಾಲಾಗುವ ದಿನ ದೂರವಿಲ್ಲ ಎಂದರು.

ಶಾಲೆಯಲ್ಲಿ ನೈತಿಕ ಶಿಕ್ಷಣವನ್ನು ಕಲಿಸಬೇಕು. ಅದು ಬಿಟ್ಟು ವಿದ್ಯಾರ್ಥಿಗಳನ್ನು ಧರ್ಮದ ವಿರುದ್ಧ ಎತ್ತಿಕಟ್ಟುವುದನ್ನು ಸಹಿಸಲಾಗದು. ಜೆರೋಸಾ ಸಂಸ್ಥೆಯ ಶಿಕ್ಷಿಯ ವಿರುದ್ಧ ಕೇಸು ಹಾಕುವ ಬದಲು ಶಾಸಕರ ಮೇಲೆ ಕೇಸು ಹಾಕಿರುವುದು ದುರದೃಷ್ಟಕರ. ತಕ್ಷಣ ಶಾಸಕರು, ಕಾರ್ಪೋರೇಟರ್‌ಗಳು ಹಾಗೂ ಹಿಂದೂ ಮುಖಂಡರ ಮೇಲಿನ ಕೇಸನ್ನು ಹಿಂಪಡೆಯಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಆಗ್ರಹಿಸಿದರು.

ಪ್ರತಿಭಟನೆಯ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಕ್ಕಾರ ಕೂಗುತ್ತ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ವಕ್ತಾರ ರವಿಶಂಕರ ಮಿಜಾರು , ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ರಾಜ್‌ಗೋಪಾಲ್ ರೈ, ವಿಜಯ್ ಕುಮಾರ್ ಶೆಟ್ಟಿ, ಅರುಣ್ ಶೇಟ್, ಅನೂಪ್ ಶೆಟ್ಟಿ, ದಿವಾಕರ ಪಾಂಡೇಶ್ವರ, ಪೂರ್ಣಿಮಾ, ವಸಂತ ಪೂಜಾರಿ, ಜಯಲಕ್ಷ್ಮೀ ಶೆಟ್ಟಿ, ಪೂಜಾ ಪೈ, ಮಹೇಶ್, ಎಚ್.ಕೆ.ಪುರುಷೋತ್ತಮ ಮುಂತಾದವರು ಪಾಲ್ಗೊಂಡಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!