May 10, 2026
Sunday, May 10, 2026
spot_img

ಸಹಾಯಕ್ಕೆ ಹೋದವನ ಮೇಲೆ FIR? ನೈತಿಕ ಪೊಲೀಸ್ ಗಿರಿ ಖಂಡಿಸಿ ಗಂಗಾವತಿಯಲ್ಲಿ ಬೃಹತ್ ಪ್ರತಿಭಟನೆ!

ಹೊಸದಿಗಂತ ಗಂಗಾವತಿ:

ನಗರದಲ್ಲಿ ಇತ್ತೀಚೆಗೆ ನಡೆದ ನೈತಿಕ ಪೊಲೀಸ್ ಗಿರಿ ಹಾಗೂ ಹಲ್ಲೆಗೊಳಗಾದ ಯುವಕನ ಮೇಲೆಯೇ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು.

ಕಳೆದ ಫೆಬ್ರವರಿ 03 ರಂದು ರಾತ್ರಿ ಗಂಗಾವತಿ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಕುಟುಂಬವೊಂದಕ್ಕೆ ಸಹಾಯ ಮಾಡಲು ಮುಂದಾಗಿದ್ದ ವೆಂಕಟೇಶ್‌ ಎಂಬ ಯುವಕನ ಮೇಲೆ ಕಿಡಿಗೇಡಿಗಳು ನೈತಿಕ ಪೊಲೀಸ್ ಗಿರಿ ನಡೆಸಿ ಹಲ್ಲೆ ಮಾಡಿದ್ದರು. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಕಾರ್ಯಕರ್ತರು ನೀಡಿದ ದೂರಿನನ್ವಯ ಪೊಲೀಸರು ವೆಂಕಟೇಶ್ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಇದು ಈಗ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದ ಗಾಂಧಿ ಸರ್ಕಲ್‌ನಿಂದ ಕೃಷ್ಣದೇವರಾಯ ಸರ್ಕಲ್‌ವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ಮತ್ತು ಪೊಲೀಸರ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಮೆರವಣಿಗೆಯ ಬಳಿಕ ಗಂಗಾವತಿ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಕಾರ್ಯಕರ್ತರು ಠಾಣೆಯೊಳಗೆ ನುಗ್ಗಿದರು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅನ್ಯಾಯಕ್ಕೊಳಗಾದ ಯುವಕನ ಮೇಲಿನ ಎಫ್‌ಐಆರ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !