ಎರಡು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಕಾಣಿಸಿಕೊಂಡ ಬೆಂಕಿ, 25ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ಪ್ರತ್ಯೇಕ ರೈಲುಗಳಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಇಟಾವಾದಲ್ಲಿ ಗುರುವಾರ ಮುಂಜಾನೆ ದೆಹಲಿ-ಸಹರ್ಸಾ ವೈಶಾಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ವೈಶಾಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಪ್ಯಾಂಟ್ರಿ ಕಾರಿನ ಮುಂದಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆ ಎಸ್6 ಬೋಗಿಯವರೆಗೂ ಆವರಿಸಿ ಅವಾಂತರ ಸೃಷ್ಟಿಸಿತ್ತು. ತಕ್ಷಣ ರೈಲನ್ನು ನಿಲ್ಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಈ ಅವಘಡಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು ಇಟಾವಾ ಗ್ರಾಮಾಂತರ ಎಸ್ಪಿ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.

ಈ ಘಟನೆಗೂ ಮುನ್ನ, ಬುಧವಾರ ರಾತ್ರಿ ಉತ್ತರ ಪ್ರದೇಶದ ಸರಾಯ್ ಭೂಪತ್ ರೈಲು ನಿಲ್ದಾಣದ ಬಳಿ ನವದೆಹಲಿ-ದರ್ಬಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,  ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ರೈಲು ಸರಾಯಿ ಭೂಪತ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಸ್ಲೀಪರ್ ಕೋಚ್‌ನಿಂದ ಹೊಗೆ ಬರುತ್ತಿರುವುದನ್ನು ಸ್ಟೇಷನ್ ಮಾಸ್ಟರ್ ಗಮನಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಲೊಕೊಪೈಲೆಟ್ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದರು. ಬಳಿಕ ಸ್ಲೀಪರ್ ಕೋಚ್‌ನಿಂದ ಪ್ರಯಾಣಿಕರನ್ನು ಸರುಕ್ಷಿತವಾಗಿ ರಕ್ಷಿಸಿದ್ದು, ಬೆಂಕಿ ಹೊತ್ತಿಕೊಂಡ ತಕ್ಷಣ ಹಲವು ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ.

ಗಾಯಗೊಂಡ ಆರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಪ್ರಯಾಣಿಕರನ್ನು ಪರ್ಯಾಯ ವ್ಯವಸ್ಥೆ ಮೂಲಕ ಗಮ್ಯ ಕಳುಹಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಘಡದಲ್ಲಿ ಸುಟ್ಟು ಕರಕಲಾದ ಮೂರು ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ. ಶಾರ್ಟ್ ಸರ್ಕ್ಯೂಟ್ ನಿಂದ ರೈಲಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!