June 27, 2026
Saturday, June 27, 2026
spot_img

ಬೆಳ್ಳಂಬೆಳಗ್ಗೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ದುಂರತ: ಅದೃಷ್ಟವಶಾತ್‌ 68 ಪ್ರಯಾಣಿಕರು ಸೇಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:


ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನಲ್ಲಿ ಭಾನುವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಪಶ್ಚಿಮ ಮಧ್ಯ ರೈಲ್ವೆಯ ಕೋಟಾ ವಿಭಾಗದ ವ್ಯಾಪ್ತಿಯಲ್ಲಿ ಬರುವ ಲುನಿ ರಿಚ್ಚಾ ಮತ್ತು ವಿಕ್ರಮಗಢ ಅಲೋಟ್ ನಿಲ್ದಾಣಗಳ ನಡುವೆ ಮುಂಜಾನೆ ಸುಮಾರು 5.30 ಕ್ಕೆ ರೈಲು ಸಂಖ್ಯೆ 12431 ರ ಬಿ-1 ಕೋಚ್‌ನಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಬೋಗಿಯಿಂದ ಹೊಗೆ ಮತ್ತು ಜ್ವಾಲೆಗಳು ಬರುತ್ತಿರುವುದನ್ನು ಮೊದಲು ಗಮನಿಸಿದ ರೈಲು ಗಾರ್ಡ್ ತಕ್ಷಣವೇ ಲೋಕೋ ಪೈಲಟ್ ರನ್ನು ಎಚ್ಚರಿಸಿದರು. ತಕ್ಷಣವೇ ರೈಲನ್ನು ನಿಲ್ಲಿಸಿ ತುರ್ತು ಸ್ಥಳಾಂತರಿಸುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಯಿತು.

ರೈಲ್ವೆ ಸಂರಕ್ಷಣಾ ಪಡೆ ಸಿಬ್ಬಂದಿ, ರೈಲಿನಲ್ಲಿದ್ದ ಇತರ ಸಿಬ್ಬಂದಿ ಮತ್ತು ಅಧಿಕಾರಿಗಳ ಸಹಾಯದಿಂದ ಪ್ರಯಾಣಿಕರನ್ನು ತಕ್ಷಣವೇ ಕೆಳಗೆ ಇಳಿಸಿದರು. ಕೇವಲ 15 ನಿಮಿಷಗಳಲ್ಲಿ ಇಡೀ ಬೋಗಿಯನ್ನು ಸಂಪೂರ್ಣವಾಗಿ ಖಾಲಿ ಮಾಡಲಾಯಿತು.

ಬಾಧಿತ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಯಾವುದೇ ಪ್ರಯಾಣಿಕರಿಗೆ ಅಥವಾ ರೈಲ್ವೆ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಒಹೆಚ್‌ಇ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸಲಾಯಿತು. ಬೆಂಕಿ ಹೊತ್ತಿಕೊಂಡ ಬಿ-1 ಕೋಚ್ ಅನ್ನು ರೈಲಿನಿಂದ ಪ್ರತ್ಯೇಕಿಸಲಾಗಿದೆ ಎಂದು ಕೋಟಾ ವಿಭಾಗದ ಪಶ್ಚಿಮ ಮಧ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಕೋಟಾ ರೈಲ್ವೆ ವಿಭಾಗದ ಪರಿಹಾರ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಈ ಅಪಘಾತದಿಂದಾಗಿ ದೆಹಲಿ-ಮುಂಬೈ ಮಾರ್ಗದ ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಮತ್ತು ಸುರಕ್ಷತಾ ತಪಾಸಣೆ ನಡೆಸಿದ ಕಾರಣ ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಂಡಿತ್ತು.

ರೈಲ್ವೆ ಅಧಿಕಾರಿಗಳ ಪ್ರಾಥಮಿಕ ತನಿಖೆಯ ಪ್ರಕಾರ, ಎಸಿ ಕೋಚ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅಗ್ನಿ ದುರಂತ ಸಂಭವಿಸಿರಹಬುದು ಎಂದು ಶಂಕಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !