ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ದುರ್ಗ್-ಪುರಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆ ಖರಿಯಾರ್ ರಸ್ತೆ ನಿಲ್ದಾಣವನ್ನು ತಲುಪುತ್ತಿದ್ದಂತೆ ರೈಲಿನ ಬಿ3 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬೆಂಕಿಯು ಬ್ರೇಕ್ ಪ್ಯಾಡ್‌ಗಳಿಗೆ ಸೀಮಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಹೇಳಿದೆ.
ಘಟನೆಯಿಂದಾಗಿ ಪ್ರಯಾಣಿಕರು ಭಯಗೊಂಡಿದ್ದು, ಹೆಚ್ಚಿನವರು ರೈಲಿನಿಂದ ಹೊರಬಂದರು. ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಲಾಯಿತು ಮತ್ತು ರೈಲು ರಾತ್ರಿ 11 ಗಂಟೆಗೆ ನಿಲ್ದಾಣದಿಂದ ಹೊರಟಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಅತ್ಯಂತ ಭೀಕರ ರೈಲು ದುರಂತಕ್ಕೆ ದೇಶವು ಸಾಕ್ಷಿಯಾದ ಕೆಲವು ದಿನಗಳ ನಂತರ ಈ ಘಟನೆಯು ನಡೆದಿದೆ.