Wednesday, June 29, 2022

Latest Posts

ಸ್ವಾತಂತ್ರ್ಯ ಹೋರಾಟದ ಫೈರ್‌ಬ್ರಾಂಡ್ ದುರ್ಗಾಬಾಯಿ ದೇಶಮುಖ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಿಟ್ಟಿದ್ದ ದುರ್ಗಾಬಾಯಿ ದೇಶಮುಖ್ ಭಾರತದ ‘ಐರನ್ ಲೇಡಿ’ ಎಂದೇ ಖ್ಯಾತರಾದವರು. ಅವರು ಸ್ವಾತಂತ್ರ್ಯದ ಫೈರ್‌ಬ್ರಾಂಡ್ ಹೋರಾಟಗಾರ್ತಿ, ಸಮಾಜ ಸೇವಕಿ, ಪ್ರಖ್ಯಾತ ವಕೀಲೆ. ತನ್ನ ದೇಶವನ್ನು ವಸಾಹತುಶಾಹಿಗಳ ಹಿಡಿತದಿಂದ ಮುಕ್ತಗೊಳಿಸಲು ಯಾವ ತ್ಯಾಗಕ್ಕೂ ಸಿದ್ದವಾಗಿದ್ದ ಮಹಾಚೇತನ.
ದುರ್ಗಾಬಾಯಿ ದೇಶಮುಖ್ ಅವರು 1909 ರ ಜುಲೈ 15 ರಂದು ಆಂಧ್ರಪ್ರದೇಶದ ರಾಜಮಂಡ್ರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಆಕೆ ಕಠಿಣ ಸ್ವಯಂ ಶಿಸ್ತಿನ ಸತ್ಯಾಗ್ರಹಿಯಾಗಿದ್ದರು. 1922 ರ ಅಸಹಕಾರ ಚಳವಳಿಯಲ್ಲಿ ನಿರ್ಭಯವಾಗಿ ಭಾಗವಹಿಸಿದರು. ಹನ್ನೆರಡು ವರ್ಷದ ಯುವತಿ ದುರ್ಗಾಬಾಯಿ ಕಾಕಿನಾಡದಲ್ಲಿ ಸತ್ಯಾಗ್ರಹ ನಡೆಸಿದ್ದು ಭಾರತೀಯ ರಾಷ್ಟ್ರೀಯ ನಾಯಕರ ಗಮನ ಸೆಳೆಯಿತು. ತನ್ನ ಬಾಲ್ಯದಿಂದಲೂ ರಾಷ್ಟ್ರೀಯತಾವಾದಿಯಾಗಿದ್ದ ಆಕೆ, ಇಂಗ್ಲಿಷ್ ಭಾಷಾ ಶಿಕ್ಷಣದ ಹೇರಿಕೆಯ ವಿರುದ್ಧ ಪ್ರತಿಭಟಿಸಲು ಶಾಲೆಯನ್ನು ತೊರೆದರು. ಜೊತೆಗೆ ಹೆಣ್ಣುಮಕ್ಕಳಿಗೆ ಹಿಂದಿ ಶಿಕ್ಷಣವನ್ನು ಉತ್ತೇಜಿಸಲು ತನ್ನ ತವರಿನಲ್ಲಿ ಬಾಲಿಕಾ ಹಿಂದಿ ಪಾಠಶಾಲೆಯನ್ನು ಪ್ರಾರಂಭಿಸಿದರು.
1930 ರ ದಶಕದಲ್ಲಿ ಮದ್ರಾಸ್‌ ವಿವಿಯಲ್ಲಿ ಕಾನೂನು ಪದವಿ ಪಡೆದು ಮದ್ರಾಸ್‌ ಹೈಕೋರ್ಟ್‌ ನಲ್ಲಿ ವಕೀಲೆಯಾಗಿ ಬಡಜನರಿಗೆ ನೆರವಾದರು. ಅವರು ಆಂಧ್ರದಲ್ಲಿ ಮಹಿಳಾ ಹೋರಾಟಗಾರ್ತಿಯರ ಪ್ರೇರಕ ಶಕ್ತಿಯಾಗಿದ್ದರು. ದುರ್ಗಾಬಾಯಿ ಮಹಾತ್ಮ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದರು. ಮಹಿಳೆಯರಿಗೆ ನೂಲುವ ಮತ್ತು ನೇಯ್ಗೆಯಲ್ಲಿ ತರಬೇತಿ ನೀಡಲು ಶಾಲೆಗಳನ್ನು ಸ್ಥಾಪಿಸುವ ಮೂಲಕ ದೇಶದೆಲ್ಲೆಡೆ ಗಾಂಧೀಜಿ ಅವರ ಸಿದ್ಧಾಂತಗಳನ್ನು ಪ್ರಚಾರ ಮಾಡಿದರು. 1923 ರಲ್ಲಿ ಕಾಕಿನಾಡದಲ್ಲಿ ನಡೆದ ಸಮ್ಮೇಳನದಲ್ಲಿ ದುರ್ಗಾಬಾಯಿಯನ್ನು ಭೇಟಿಯಾಗಿದ್ದ ಜವಾಹರಲಾಲ್ ನೆಹರೂ ಆಕೆಯ ಧೈರ್ಯ ಮತ್ತು ಅವರ ಕರ್ತವ್ಯ ಬದ್ಧತೆಯಿಂದ ಪ್ರಭಾವಿತರಾಗಿದ್ದರು. ದೇಶ ಸ್ವಾತಂತ್ರ್ಯ ಗಳಿಸುವ ವೇಳೆ ಸಾಂವಿಧಾನಿಕ ಸಭೆ ಮತ್ತು ಯೋಜನಾ ಆಯೋಗದ ಸದಸ್ಯರಾಗಿದ್ದ ದುರ್ಗಾಬಾಯಿ ಅವರು, ಮಕ್ಕಳು, ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿವರ ಕಲ್ಯಾಣಕ್ಕಾಗಿ ಶಾಸನಗಳು ಜಾರಿಗೆ ಬರುವಲ್ಲಿ ಪ್ರಾಭಾವ ಬೀರಿದರು.
ದುರ್ಗಾಭಾಯಿ ಅಂಧರಿಗಾಗಿ ಶಾಲೆ, ಹಾಸ್ಟೆಲ್ ಮತ್ತು ಬೆಳಕಿನ ಎಂಜಿನಿಯರಿಂಗ್ ಕಾರ್ಯಾಗಾರವನ್ನು ಸ್ಥಾಪಿಸಿದರು. ಹೆಣ್ಣುಮಕ್ಕಳ ಮತ್ತು ಅಂಗವಿಕಲ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಗುರುತಿಸಿ ಇಂದಿರಾ ಗಾಂಧಿ ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ‘ಭಾರತದಲ್ಲಿ ಸಮಾಜಕಾರ್ಯದ ತಾಯಿ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss