ಶಿವಸೇನೆಯಿಂದ ಮೊದಲ ಪಟ್ಟಿ ಬಿಡುಗಡೆ: ಕಾಂಗ್ರೆಸ್‌ ಸಿಟ್ಟಿಗೆ ಠಾಕ್ರೆ ಡೋಂಟ್‌ಕೇರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ17 ಲೋಕಸಭಾ ಕ್ಷೇತ್ರಗಳಿಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬುಧವಾರ ಅಭ್ಯರ್ಥಿಗಳನ್ನು ಘೋಷಿಸಿದೆ.

ಇತ್ತ ಉದ್ಧವ್ ಠಾಕ್ರೆ ನಡೆ ಮಹಾವಿಕಾಸ ಅಘಾಡಿ (ಎಂವಿಎ) ಕೂಟದಲ್ಲಿ ಬಿಕ್ಕಟ್ಟು ತಲೆದೋರಿದೆ. ಎಂವಿಎ ಕೂಟದಲ್ಲಿರುವ ಎನ್‌ಸಿಪಿ (ಶರದ್‌ ಪವಾರ್ ಬಣ), ಕಾಂಗ್ರೆಸ್ ಜತೆಗೆ ಸ್ಥಾನ ಹಂಚಿಕೆ ಅಂತಿಮವಾಗುವ ಮುನ್ನವೇ ಶಿವಸೇನಾ (ಯುಬಿಟಿ) ಉಮೇದುವಾರರನ್ನು ಘೋಷಿಸಿದೆ.

ಮುಂಬೈನ ನಾಲ್ಕು ಕ್ಷೇತ್ರಗಳಿಗೆ ಶಿವಸೇನಾ (ಯುಬಿಟಿ) ಉಮೇದುವಾರರನ್ನು ಘೋಷಿಸಿದೆ. ಅವುಗಳಲ್ಲಿ ಸಂಜಯ್ ನಿರುಪಮ್ ಕಣ್ಣು ನೆಟ್ಟಿದ್ದ ಮುಂಬೈ ವಾಯವ್ಯ ಕ್ಷೇತ್ರ ಹಾಗೂ ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ಪ್ರೊ.ವರ್ಷಾ ಗಾಯಕವಾಡ್‌ ಅವರು ಸ್ಪರ್ಧಿಸಬೇಕು ಎಂದು ಬಯಸಿದ್ದ ಮುಂಬೈ ದಕ್ಷಿಣ ಮಧ್ಯ ಕ್ಷೇತ್ರಗಳೂ ಸೇರಿವೆ. ಸಾಂಗ್ಲಿ, ಠಾಣೆ, ರತ್ನಗಿರಿ ಸಿಂಧುದುರ್ಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂಥ ಬಿಕ್ಕಟ್ಟು ಉಂಟಾಗಿದೆ.

ಈ ನಡುವೆ, ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಸಂಜಯ್ ನಿರುಪಮ್ ಅವರು ಶಿವಸೇನಾ (ಯುಬಿಟಿ) ಮತ್ತು ಸ್ಥಾನ ಹಂಚಿಕೆ ಮಾತುಕತೆಯಲ್ಲಿ ತೊಡಗಿದ್ದ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

‘ನಾನು ಹೆಚ್ಚೆಂದರೆ ಇನ್ನು ಒಂದು ವಾರ ಕಾದು ನೋಡುತ್ತೇನೆ. ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ನಾನು ಆಯ್ಕೆಗಳೇ ಇಲ್ಲದ ಸ್ಥಿತಿಯಲ್ಲಿಲ್ಲ. ಎಲ್ಲ ಆಯ್ಕೆಗಳೂ ನನಗೆ ಮುಕ್ತವಾಗಿವೆ’ ಎಂದು ಸಂಜಯ್ ನಿರುಪಮ್ ತಮ್ಮ ಪಕ್ಷದ ವರಿಷ್ಠರಿಗೆ ಗಡುವು ನೀಡಿದ್ದಾರೆ.

ಮುಖ್ಯಮಂತ್ರಿ ಶಿಂದೆ ಬಣದಲ್ಲಿರುವ ಗಜಾನನ ಕೀರ್ತಿಕರ್ ಅವರ ಮಗ ಅಮೋಲ್ ಕೀರ್ತಿಕರ್ ಅವರಿಗೆ ಶಿವಸೇನಾ (ಯುಬಿಟಿ) ಉತ್ತರ ಮುಂಬೈನ ಟಿಕೆಟ್ ನೀಡಿರುವುದನ್ನೂ ಸಂಜಯ್ ನಿರುಪಮ್ ಟೀಕಿಸಿದ್ದಾರೆ. ಕೀರ್ತಿಕರ್ ಅವರನ್ನು ‘ಖಿಚಡಿ ಚೋರ್’ ಎಂದು ಕರೆದಿರುವ ಸಂಜಯ್, ‘ಶಿವಸೇನೆಯು ಖಿಚಡಿ ಚೋರ್‌ಗೆ ಟಿಕೆಟ್ ನೀಡಿದೆ. ನಾವು ಖಿಚಡಿ ಚೋರ್‌ ಅಭ್ಯರ್ಥಿಗಳಿಗಾಗಿ ಕೆಲಸ ಮಾಡುವುದಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದೆಡೆ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ತಮಗೆ ಔರಂಗಾಬಾದ್‌ ಕ್ಷೇತ್ರದ ಟಿಕೆಟ್ ನೀಡದಿರುವುದಕ್ಕೆ ಶಿವಸೇನಾ (ಯುಬಿಟಿ) ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅವರ ಬದಲಿಗೆ ಪಕ್ಷವು ಐದು ಬಾರಿಯ ಸಂಸದ, ಕಳೆದ ಬಾರಿ ಪರಾಭವಗೊಂಡಿದ್ದ ಚಂದ್ರಕಾಂತ್ ಖೈರೆ ಅವರಿಗೆ ಟಿಕೆಟ್ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!