October 9, 2026
Friday, October 9, 2026
spot_img

ಮಲ್ಪೆಯಲ್ಲಿ ಲಂಗರು ಹಾಕಿದ್ದ ಬೋಟ್‌ನಲ್ಲೇ ಮೀನುಗಾರ ಕಾರ್ಮಿಕನ ಕೊ*ಲೆ: ಪರಾರಿಯಾಗುತ್ತಿದ್ದ ಆರೋಪಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್‌ನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಮೀನುಗಾರ ಕಾರ್ಮಿಕನೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಮೃತನನ್ನು ಅಭಿಷೇಕ್ (24) ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಯನ್ನು ಗೋವಿಂದ ಎಂದು ಗುರುತಿಸಲಾಗಿದೆ.

ಆ.24ರ ರಾತ್ರಿ ಬೋಟ್‌ನಲ್ಲಿ ಗೋವಿಂದ ಮತ್ತು ಅಭಿಷೇಕ್ ನಡುವೆ ತೀವ್ರ ಗಲಾಟೆ ನಡೆದಿತ್ತು ಎನ್ನಲಾಗಿದೆ. ಜಗಳದ ಮುಂದುವರಿದ ಭಾಗವಾಗಿ ಆ.25ರ ಬೆಳಗಿನ ಜಾವ ಗೋವಿಂದ ಅಭಿಷೇಕ್‌ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮಲ್ಪೆ ಪೊಲೀಸ್ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಕೊಲೆ ಬಳಿಕ ಆರೋಪಿ ಗೋವಿಂದ ಉಡುಪಿಯಿಂದ ರೈಲಿನಲ್ಲಿ ಮುಂಬೈ ಅಥವಾ ಹೈದರಾಬಾದ್‌ಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಸಂದರ್ಭ ಉಡುಪಿ ರೈಲು ನಿಲ್ದಾಣದತ್ತ ತೆರಳುತ್ತಿದ್ದ ಆತನನ್ನು ವಶಕ್ಕೆ ಪಡೆದಿದ್ದಾರೆ. ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read