ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಮುದ್ರದ ಗಡಿ ದಾಟಿ ಮೀನುಗಾರಿಕೆಯಲ್ಲಿ ತೊಡಗಿದ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆಯು ಭಾನುವಾರ 12 ಭಾರತೀಯ ಮೀನುಗಾರರನ್ನು ಬಂಧಿಸಿ ಅವರ ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಇದರೊಂದಿಗೆ ಶ್ರೀಲಂಕಾದಲ್ಲಿ ಈ ವರ್ಷ ಬಂಧನಕ್ಕೆ ಒಳಗಾದ ಭಾರತೀಯ ಮೀನುಗಾರರ ಸಂಖ್ಯೆ 462ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರಾಂತ್ಯದ ಜಾಫ್ನಾ, ಪೆಡ್ರೊ ಕರಾವಳಿಯಲ್ಲಿ ಮೀನುಗಾರರನ್ನು ಬಂಧಿಸಿದ್ದು, ಅವರ ಬೋಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ 12 ಮೀನುಗಾರರನ್ನು ಕಂಕಸಂತುರೈ ಬಂದರಿಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕಾ ಇನ್ ಸ್ಪೆಕ್ಟರ್ ಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ವರ್ಷ ಇಲ್ಲಿಯವರೆಗೆ 62 ಭಾರತೀಯ ಮೀನುಗಾರಿಕೆ ದೋಣಿಗಳನ್ನು ವಶಕ್ಕೆ ಪಡೆದಿದೆ ಮತ್ತು 462 ಭಾರತೀಯ ಮೀನುಗಾರರನ್ನು ಬಂಧಿಸಿ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಶ್ರೀಲಂಕಾ ನೌಕಾಪಡೆ ಮಾಹಿತಿ ನೀಡಿದೆ