ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಗಾಗಿ ಒಂದಾಗಿರುವ ‘ಇಂಡಿಯಾ’ ಕೂಟದ ಮಿತ್ರಪಕ್ಷಗಳ ನಡುವೆ ವೈಮನಸ್ಸು ಶುರುವಾಗಿದ್ದು, ಸ್ಥಾನ ಹೊಂದಾಣಿಕೆಯಲ್ಲಿ ಅಪಸ್ವರ ಕೇಳಿಬರುತ್ತಿದೆ.
ಸೀಟು ಹಂಚಿಕೆಗೆ ಸಂಬಂಧಿಸಿದ ಕಾಂಗ್ರೆಸ್ಸಿನ ರಾಷ್ಟ್ರೀಯ ಮೈತ್ರಿ ಸಮಿತಿಯ ಸಭೆಗೆ ಯಾರನ್ನೂ ಕಳುಹಿಸದೇ ಇರಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿರ್ಧರಿಸಿದೆ. ಈ ವಿಷಯವನ್ನು ಕಾಂಗ್ರೆಸ್ಸಿಗೂ ತಿಳಿಸಿದೆ. ಇದರಿಂದಾಗಿ ‘ಇಂಡಿಯಾ’ ಕೂಟದಲ್ಲಿ ಹೊಸ ಬಿರುಕು ಸೃಷ್ಟಿಯಾಗಿದೆ.
ಸ್ಥಾನ ಹೊಂದಾಣಿಕೆ ಕುರಿತಂತೆ ಮಾತುಕತೆಗೆ ಬರಲು ಎಲ್ಲ ಮಿತ್ರಪಕ್ಷಗಳಂತೆ ತೃಣಮೂಲ ಕಾಂಗ್ರೆಸ್ ಅನ್ನೂ ಕಾಂಗ್ರೆಸ್ ಆಹ್ವಾನಿಸಿತ್ತು. ಆದರೆ ಯಾರನ್ನೂ ಕಳುಹಿಸದಿರಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ
ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಕಾಂಗ್ರೆಸ್ಸಿಗೆ ಕೇವಲ 2 ಸ್ಥಾನವನ್ನು ಬಿಟ್ಟುಕೊಡಲು ಮಮತಾ ಮುಂದಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳು ಇವಾಗಿವೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪಲು ತಯಾರಿಲ್ಲ ಎಂದು ಹೇಳಲಾಗುತ್ತಿದೆ.
ಇದರ ಜತೆಗೆ ಮೇಘಾಲಯದಲ್ಲಿ 1, ಅಸ್ಸಾಂನಲ್ಲಿ ಕನಿಷ್ಠ 2 ಸ್ಥಾನಗಳನ್ನು ಕೇಳುತ್ತಿದೆ. ಗೋವಾದಿಂದಲೂ ಒಂದು ಸ್ಥಾನದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಜೆಡಿಯು ಕೂಡಾ ಕಾಂಗ್ರೆಸ್ ಜೊತೆಗೆ ಯಾವುದೇ ಸೀಟು ಹೊಂದಾಣಿಕೆ ಮಾತುಕತೆ ಇಲ್ಲ. ಕಾಂಗ್ರೆಸ್ ಮಾತುಕತೆ ಏನಿದ್ದರೂ ಆರ್‌ಜೆಡಿ ಜೊತೆಗೆ ಎಂದು ಹೇಳಿತ್ತು.