ಪಂಚರಾಜ್ಯ ಚುನಾವಣೆ: ಜನವರಿ 31 ರವರೆಗೆ ಸಭೆಗಳು, ರೋಡ್​ ಶೋಗಳ ನಿರ್ಬಂಧ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಚರಾಜ್ಯ ಚುನಾವಣೆಯಲ್ಲಿ ಪ್ರಚಾರ ಸಭೆಗಳು, ರೋಡ್​ಶೋ, ರ್ಯಾಲಿಗಳು ಸೇರಿ ಭೌತಿಕ ಸಭೆಗಳಿಗೆ ಈಗಾಗಲೇ ಹೇರಲಾಗಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ಜನವರಿ 31ರವರೆಗೆ ವಿಸ್ತರಿಸಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ಐದು ರಾಜ್ಯಗಳಾದ ಗೋವಾ, ಮಣಿಪುರ, ಉತ್ತರಪ್ರದೇಶ, ಉತ್ತರಾಖಂಡ್​, ಪಂಜಾಬ್​​ಗಳಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಜನವರಿ 15ರವರೆಗೆ ರೋಡ್ ಶೋ, ಸಾರ್ವಜನಿಕ ಪ್ರಚಾರದ ನೆಪದಲ್ಲಿ ಜನರನ್ನು ಸೇರಿಸುವ, ಪ್ರಚಾರ ಸಭೆ, ರ್ಯಾಲಿಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದರು. ನಂತರ ಜನವರಿ 15ರಂದು ಮತ್ತೊಮ್ಮೆ ಸಭೆ ನಡೆಸಿ, ನಿರ್ಬಂಧ ಅವಧಿಯನ್ನು ಜನವರಿ 22ರವರೆಗೆ ವಿಸ್ತರಣೆ ಮಾಡಿದ್ದರು.
ಇದೀಗ ಟ್ವೀಟ್ ಮಾಡಿರುವ ಚುನಾವಣಾ ಆಯೋಗದ ವಕ್ತಾರ, ವಿಧಾನಸಭೆ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳು ಮತ್ತು ರೋಡ್​ ಶೋಗಳಿಗೆ ಹೇರಲಾಗಿದ್ದ ನಿಷೇಧವನ್ನು ಜನವರಿ 31ರವರೆಗೂ ವಿಸ್ತರಿಸಲಾಗಿದೆ.
ಇನ್ನು ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಜನವರಿ 28ರಿಂದ ತುಸು ರಿಯಾಯಿತಿ ನೀಡಲಾಗುವುದು. ಜನಮಿತಿಯಲ್ಲಿ ಅವರು ಸಾರ್ವಜನಿಕ ಸಭೆ ನಡೆಸಬಹುದು ಎಂದಿದೆ.
ಅದೇ ರೀತಿ ಮನೆ ಮನೆ ಪ್ರಚಾರಕ್ಕೆ ವಿಧಿಸಲಾಗಿದ್ದ ಜನಮಿತಿಯನ್ನು 5 ಜನರಿಂದ 10 ಜನರಿಗೆ ವಿಸ್ತರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಕ್ಕಾಗಿ ವೀಡಿಯೊ ವ್ಯಾನ್‌ಗಳನ್ನು ಬಳಸುವುದನ್ನು ಅನುಮತಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!