ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭ: ನಾಗರಹೊಳೆ, ದುಬಾರೆಯಿಂದ ಆಗಮಿಸಿದ ಐದು ಆನೆಗಳು

ಹೊಸದಿಗಂತ ವರದಿ ಕಡಬ :

ಊರಿಗೆ ಬಂದು ಉಪಟಳ ನೀಡಿ, ಜನರನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಸೆರೆ ಹಿಡಿಯಲು ಕಡಬ ಭಾಗದಲ್ಲಿ ‘ಆಫರೇಷನ್ ಎಲಿಫೆಂಟ್’ ಕಾರ್ಯಾಚರಣೆ ಆರಂಭಗೊಂಡಿದೆ. ಎಲ್ಲಾ ಸಿದ್ಧತೆಗಳೊಂದಿಗೆ ಮಂಗಳವಾರ ಬೆಳಿಗ್ಗಿನಿಂದಲೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಕಾಡಾನೆಯನ್ನು ಹಿಡಿಯಲು ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ‌ 5 ಆನೆಗಳು ಆಗಮಿಸಿದೆ. ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ,ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿದೆ.

ಲಾರಿಗಳ ಮೂಲಕ ಆನೆಗಳು ಸೋಮವಾರ ರಾತ್ರಿ ಕಡಬಕ್ಕೆ ಆಗಮಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಲ್ಲಲ್ಲಿ ವೀಕ್ಷಣೆ ನಡೆಸಿ ಹಾಗು ಡ್ರೋನ್ ಬಳಸಿ ಕಾಡಾನೆಯ ಚಲನ ವಲನಗಳನ್ನು ಪತ್ತೆ ಹಚ್ಚಿ ಸಾಕಾನೆಗಳ ಸಹಕಾರದಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲಾಗುತ್ತದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್, ರಾಘವೇಂದ್ರ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾಗರಹೊಳೆ ಹಾಗು ಮಂಗಳೂರಿನಿಂದ ತಜ್ಞ ವೈದ್ಯಾಧಿಕಾರಿಗಳ ತಂಡವೂ ಆಗಮಿಸಿದೆ.

ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಕಾಡಾನೆ ಹಾವಳಿ ತಡೆಯಲು ಕ್ರಮ ಕೈಗೊಳ್ಳಬೇಕು, ಜನರನ್ನು ಬಲಿ ಪಡೆದ ಆನೆಯನ್ನು ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಎಸ್.ಅಂಗಾರ, ಜಿಲ್ಲಾಧಿಕಾರಿ ರವಿಕುಮಾರ್.‌ಎಂ.ಆರ್, ಡಿಎಫ್ಒ ದಿನೇಶ್ ಕುಮಾರ್ ಅವರು ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವ ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಇಲಾಖೆ ಕಾಡಾನೆ ಸೆರೆಗೆ‌ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!