ಪೋಷಕರಿಗೆ ದೂರು ನೀಡಿದ್ದಕ್ಕೆ ಗರ್ಭಿಣಿ ಶಿಕ್ಷಕಿಯ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿದ್ಯಾರ್ಥಿಗಳ ಅಧ್ಯಯನದ ಬಗ್ಗೆ ಪೋಷಕರಿಗೆ ದೂರು ನೀಡಿದ್ದಕ್ಕಾಗಿ ಗರ್ಭಿಣಿ ಶಿಕ್ಷಕಿಯ ಮೇಲೆ ಕೆಲವು ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ದಾರುಣ ಘಟನೆ ಅಸ್ಸಾಂನಲ್ಲಿ ನಡೆದಿದೆ. ಭಾನುವಾರ ಸಂಜೆ ದಿಬ್ರುಗಢ್ ಜಿಲ್ಲೆಯ ಮೊರಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜವಾಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಭಾನುವಾರ ಪೋಷಕ-ಶಿಕ್ಷಕರ ಪರಿಷತ್ತು ಸಭೆ ನಡೆದಿತ್ತು, ಈ ಸಂದರ್ಭದಲ್ಲಿ ಇತಿಹಾಸ ಬೋಧಿಸುವ ಶಿಕ್ಷಕಿ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ದೂರಿದರು. ಕೆಲ ವಿದ್ಯಾರ್ಥಿಗಳು ಸರಿಯಾಗಿ ಓದುತ್ತಿಲ್ಲ ಎಂದು ಅವರವರ ಪೋಷಕರಿಗೆ ದೂರು ನೀಡಿದರು. ಇದರಿಂದ ಕೆಲ ವಿದ್ಯಾರ್ಥಿಗಳು ಕೋಪಗೊಂಡು ಮರುದಿನ ಐದು ತಿಂಗಳ ಗರ್ಭಿಣಿ ಶಿಕ್ಷಕಿ ಮೇಲೆ ಏಕಾಏಕಿ ದಾಳಿ ಮಾಡಿದರು. ಶಾಲೆಯಲ್ಲೇ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಕೂದಲು ಹಿಡಿದು ತಳ್ಳಿ ಪಕ್ಕದಲ್ಲಿದ್ದ ಉಪ ಪ್ರಾಂಶುಪಾಲರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸಹ ಶಿಕ್ಷಕರು, ಕೆಲವು ವಿದ್ಯಾರ್ಥಿನಿಯರು ಮತ್ತು ಇತರ ಸಿಬ್ಬಂದಿ ಗಲಾಟೆಯನ್ನು ತಡೆದರು.

ವಿದ್ಯಾರ್ಥಿಗಳ ಹಲ್ಲೆಯಿಂದ ಮತ್ತಷ್ಟು ವಿಚಲಿತಳಾದ ಶಿಕ್ಷಕಿಯನ್ನು ಸಿಬ್ಬಂದಿ ಶಾಲಾ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದರು. ಸದ್ಯ ಶಿಕ್ಷಕಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಉಪ ಪ್ರಾಂಶುಪಾಲರು ವಿದ್ಯಾರ್ಥಿಗಳ ಪೋಷಕರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ. ಈ ವಿಷಯ ತಿಳಿದ ವಿದ್ಯಾರ್ಥಿಗಳು ಮತ್ತೆ ಕೋಪಗೊಂಡು ವೈಸ್ ಪ್ರಿನ್ಸಿಪಾಲ್ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಕೂಡಲೇ ಅಲ್ಲಿಂದ ತಪ್ಪಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರಲ್ಲಿ ಕೆಲವರು ಅಪ್ರಾಪ್ತರಾಗಿರುವುದರಿಂದ ಪ್ರಕರಣ ದಾಖಲಿಸುವ ಚಿಂತನೆ ನಡೆದಿದೆ. 10 ಮತ್ತು 11ನೇ ತರಗತಿಯ 22 ವಿದ್ಯಾರ್ಥಿಗಳು ಈ ದಾಳಿ ನಡೆಸಿದ್ದಾರೆನ್ನಲಾಗಿದೆ. ಜವಾಹರ ನವೋದಯ ವಿದ್ಯಾಲಯದ ಉನ್ನತ ಅಧಿಕಾರಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಈ ಘಟನೆಯ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!