ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಡಾಕ್ಯುಮೆಂಟರಿಯಲ್ಲಿ ಸಣ್ಣ ವಿಡಿಯೋ ತುಣುಕು ಬಳಕೆ ಮಾಡಿಕೊಂಡಿರುವ ಬಗ್ಗೆ ಧನುಶ್, ನಯನತಾರಾಗೆ ನೊಟೀಸ್ ನೀಡಿದ್ದು, ನೊಟೀಸ್ ನೀಡಿದ ಧನುಶ್ ಅನ್ನು ನಯನತಾರಾ, ನೀಚ ಎಂದು ಕರೆದಿದ್ದು ಭಾರಿ ದೊಡ್ಡ ಸುದ್ದಿಯಾಗಿದೆ. ಧನುಶ್ ಜೊತೆಗೆ ನಟಿಸಿರುವ ಕೆಲವು ನಟಿಯರು ಸಹ ನಯನತಾರಾಗೆ ಈ ವಿಷಯದಲ್ಲಿ ಬೆಂಬಲ ಸೂಚಿಸಿದ್ದಾರೆ.
ಡಾಕ್ಯುಮೆಂಟರಿ ವಿಷಯಕ್ಕೆ ಬರುವುದಾದರೆ ಡಾಕ್ಯುಮೆಂಟರಿಯಲ್ಲಿ ನಯನತಾರಾ ಅವರ ಖಾಸಗಿ ಹಾಗೂ ವೃತ್ತಿ ಜೀವನದ ಸಾಕಷ್ಟು ವಿಷಯಗಳಿವೆ. ತಮ್ಮ ಹಳೆಯ ಲವ್ ಲೈಫ್, ಅದರಿಂದ ಎದುರಿಸಿದ ಸಮಸ್ಯೆ. ವೃತ್ತಿ ಜೀವನದಲ್ಲಿ ಆದ ಏರು-ಪೇರುಗಳು. ಸಿನಿಮಾ ರಂಗವನ್ನೇ ತೊರೆಯಬೇಕು ಎಂದುಕೊಂಡಿದ್ದು ಹೀಗೆ ಹಲವು ವಿಷಯಗಳ ಬಗ್ಗೆ ನಯನತಾರಾ ಮಾತನಾಡಿದ್ದಾರೆ. ತಮ್ಮ ಪತಿ ವಿಘ್ನೇಷ್ ಬಗ್ಗೆಯೂ ಮಾತನಾಡಿರುವ ನಯನತಾರಾ, ತಮ್ಮ ಪತಿಯನ್ನು ನಾಯಿಗೆ ಹೋಲಿಸಿದ್ದ ಘಟನೆ ನೆನಪಿಸಿಕೊಂಡು ತುಸು ಭಾವುಕಗೊಂಡಿದ್ದಾರೆ.
ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ನಯನತಾರಾ ಪತಿ ವಿಘ್ನೇಶ್ ಶಿವನ್, ‘ನಾವು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಬಹಿರಂಗಗೊಳಿಸಿದಾಗ ನನ್ನ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ‘ಫೈವ್ ಸ್ಟಾರ್ ಹೋಟೆಲ್ ಬಿರಿಯಾನಿ ನಾಯಿಗೆ ಸಿಕ್ಕಿದೆ’ ಎಂಬ ಮೀಮ್ಗಳು ಹರಿದಾಡಿದವು. ಅದನ್ನೆಲ್ಲ ನೋಡಿದಾಗ ಸಾಕಷ್ಟು ನೋವಾಗುತ್ತಿತ್ತು’ ಎಂದಿದ್ದಾರೆ. ‘ಬ್ಯೂಟಿ, ಬೀಸ್ಟ್ ಅನ್ನು ಆಯ್ಕೆ ಮಾಡಿಕೊಂಡರೆ ಯಾರೇನು ಮಾಡಲಾಗುತ್ತದೆ’ ಎಂಬ ಮೀಮ್ಗಳು ಸಹ ಹರಿದಾಡಿದವು ಎಂದು ನಯನತಾರಾ ಬೇಸರ ವ್ಯಕ್ತಪಡಿಸಿದ್ದಾರೆ.