ಹೊಸದಿಗಂತ ವರದಿ,ಮದ್ದೂರು :
ಪ್ರಧಾನಿ ನರೇಂದ್ರಮೋದಿ ಅವರ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಗಳ ಫಲಿತಾಂಶ ಸಾಬೀತುಪಡಿಸಿದೆ ಎಂದು ಕೇಂದ್ರ ಕೈಗಾರಿಕಾ ರಾಜ್ಯ ಸಚಿವ ಕಿಶನ್‌ಪಾಲ್ ಗುರ್ಜರ್ ಭಾನುವಾರ ಹೇಳಿದರು.
ಮದ್ದೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ಹೆಮ್ಮನಹಳ್ಳಿಯ ಶ್ರೀ ಚೌಡೇಶ್ವರಿ ಭವನದಲ್ಲಿ ವಿಕಾಸ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಚರಾಜ್ಯ ಚುನಾವಣೆಯಲ್ಲಿ ಛತ್ತೀಸ್‌ಘಡ, ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಅಲ್ಲಿನ ಜನರು ಮೋದಿ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಮನಗಂಡು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ನೀಡಿರುವ ಪುಕ್ಕಟ್ಟೆ ಗ್ಯಾರಂಟಿಗಳಿಂದಾಗಿ ಜನರು ಆ ಪಕ್ಷದ ಕಡೆ ವಾಲಿದ್ದಾರೆ ಎಂದರು.
ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದ ಪ್ರಮುಖ ಜನಪರ ಯೋಜನೆಗಳ ಪರಿಪೂರ್ಣತೆ ಸಾಲಿನಲ್ಲಿ ಗುರಿಯನ್ನು ಹೊಂದಿವೆ. ದೇಶಾದ್ಯಂತ ಎಲ್ಲಾ ಉದ್ದೇಶಿತ ಫಲಾನುಭವಿಗಳು ಅವುಗಳ ಪ್ರಯೋಜನಗಳು ಸಮಯೋಚಿತವಾಗಿ ತಲುಪಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರಮೋದಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ಅಗ್ಗದ ಪ್ರಚಾರ ಪಡೆಯುತ್ತಿಲ್ಲ. ಯೋಜನೆಗಳು ಜನರಿಗೆ ಅಧಿಕಾರಿಗಳ ಮೂಲಕ ಮನೆ ಬಾಗಿಲಿಗೆ ತಲುಪಿಸುವುದು ಅವರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.