October 12, 2026
Monday, October 12, 2026
spot_img

ನೇಪಾಳದಲ್ಲಿ ಮತ್ತೆ ಪ್ರವಾಹ ಭೀತಿ : ಹೈ ಅಲರ್ಟ್‌ ಘೋಷಣೆ, ರಕ್ಷಣಾ ಕಾರ್ಯಾಚರಣೆ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗ ಸಂಭವಿಸಿರುವ ಪ್ರವಾಹದಿಂದಲೇ ಚೇತರಿಸಿಕೊಳ್ಳದ ನೇಪಾಳಕ್ಕೆ ಮತ್ತೊಂದು ಬರೆ ಬೀಳುವ ಸಾಧ್ಯತೆ ಇದೆ. ಟಿಬೆಟ್‌ ಗಡಿಯಲ್ಲಿ ಸರೋವರವೊಂದು ಒಡೆದು ವೇಗವಾಗಿ ಮುನ್ನುಗ್ಗಿ ಬರುತ್ತಿದ್ದು, ನೇಪಾಳದಲ್ಲಿ ಮತ್ತೊಂದು ಪ್ರವಾಹದ ಭೀತಿ ಎದುರಾಗಿದೆ.

ಸದ್ಯ ನೇಪಾಳದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ನೇಪಾಳದಲ್ಲಿ ಉಂಟಾದ ಮಹಾ ಪ್ರವಾಹಕ್ಕೆ ಕನಿಷ್ಠ 469 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸ್ಥಗಿತವಾಗಿರುವ ಕಾರಣ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಪೊಲೀಸರ ಪ್ರಕಟಣೆಯಲ್ಲಿ ಏನಿದೆ?

ಟಿಬೆಟ್‌ ಗಡಿ ಭಾಗದಲ್ಲಿ ಸರೋವರವೊಂದು ಒಡೆದು ನಾಡಿನತ್ತ ಮುನ್ನುಗ್ಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರತಿಯೊಬ್ಬರೂ ಈಗಲೇ ಸುರಕ್ಷಿತ ಸ್ಥಳಕ್ಕೆ ತೆರಳಿ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ ತೀವ್ರ ಎಚ್ಚರಿಕೆ ವಹಿಸಿ ಈ ಕ್ಷಣವೇ ಸುರಕ್ಷಿತ ತಾಣಗಳಿಗೆ ತೆರಳಬೇಕು ಎಂದು ಪ್ರಕಟಣೆ ನೀಡಲಾಗಿದೆ.

ಚೀನಾ ಸರ್ಕಾರದಿಂದಲೂ ಕಾರ್ಯಾಚರನೆ ಸ್ಥಗಿತ

ಈ ಸುದ್ದಿ ಚೀನಾ ಸರ್ಕಾರವನ್ನೂ ತಲುಪಿದ್ದು, ಟಿಬೆಟ್‌ ಬಳಿ ಭೀಕರ ಪ್ರವಾಹದ ಹಿನ್ನೆಲೆ ಸರ್ಕಾರ ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಸಣ್ಣ ಪುಟ್ಟ ಸುರಕ್ಷಿತ ತಾಣಗಳು ಕಂಡರೂ ಮೊದಲು ಜೀವ ಉಳಿಸಿಕೊಳ್ಳಿ ಎಂದು ಸರ್ಕಾರ ಸೂಚನೆ ನೀಡಿದೆ.

ಅಪಾಯಕಾರಿ ಮಟ್ಟದಲ್ಲಿ ಮುನ್ನುಗ್ಗುತ್ತಿದೆ ನೀರು

ಚೀನಾ ನೇಪಾಳದ ಗಡಿಯಲ್ಲಿ ಬೃಹತ್‌ ಭೂಕುಸಿತ ಸಂಭವಿಸಿತ್ತು. ಭೂಕುಸಿತದ ನಂತರ ಭಗ್ನಾವೇಶಗಳಿಂದ ಸರೋವರವೊಂದು ಸೃಷ್ಟಿಯಾಗಿತ್ತು. ಈ ಸರೋವರದ ನೀರು ರಕ್ಷಣಾ ತಂಡಗಳು ಇರುವ ಜಾಗಕ್ಕೆ ವೇಗವಾಗಿ ಮುನ್ನುಗ್ಗುತ್ತಿದೆ. ಹೀಗಾಗಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಜಾಗದಿಂದ ಕನಿಷ್ಠ ಒಂದು ಕಿಲೋಮೀಟರ್‌ ದೂರದಲ್ಲಿರುವ ಸುರಕ್ಷಿತ ತಾಣಗಳಿಗೆ ಎಲ್ಲರೂ ತೆರಳುವಂತೆ ಸೂಚನೆ ನೀಡಲಾಗಿದೆ.

Must Read