ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಘಾಲಯದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಶನಿವಾರ ಕನಿಷ್ಠ 10 ಜನ ಮೃತಪಟ್ಟಿದ್ದಾರೆ.
ಗಾರೋ ಹಿಲ್ಸ್‌ನ ಎಲ್ಲಾ ಐದು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಪಶ್ಚಿಮ ಗಾರೋ ಹಿಲ್ಸ್(ಮೂರು) ಮತ್ತು ದಕ್ಷಿಣ ಗ್ಯಾರೋ ಹಿಲ್ಸ್(ಏಳು)ನಲ್ಲಿ ಸಾವುಗಳು ವರದಿಯಾಗಿವೆ.
ಶುಕ್ರವಾರ ಮಧ್ಯರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಲು ಪ್ರದೇಶ ಹಾಗೂ ಪಶ್ಚಿಮ ಗಾರೋ ಬೆಟ್ಟಗಳ ಬಯಲು ಸೀಮೆಯಲ್ಲಿ ಪ್ರವಾಹ ಉಂಟಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ದಕ್ಷಿಣ ಗಾರೋ ಹಿಲ್ಸ್‌ನಲ್ಲಿರುವ ಗಾಸುಪಾರಾದಲ್ಲೂ ಪ್ರವಾಹ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಅಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿದೆ.
‘ದಲುವಿನಲ್ಲಿ ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಮೃತರ ಸಂಬಂಧಿಕರಿಗೆ(ಮೃತರ) ಸೂಕ್ತ ಪರಿಹಾರ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
‘ಗಸುವಾಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಹತಿಯಾಸಿಯಾ ಸಂಗ್ಮಾ ಎಂಬ ಗ್ರಾಮದಲ್ಲಿ ಏಳು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.