ʼಭಾರತದ ಕಾನೂನು ಸುವ್ಯವಸ್ಥೆಯನ್ನು ಸ್ಮಾರ್ಟ್‌ ಮಾಡುವತ್ತ ಗಮನಹರಿಸಿʼ: ಗೃಹಸಚಿವರುಗಳ ಚಿಂತನ ಶಿಬಿರದಲ್ಲಿ ಮೋದಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಕಾನೂನು ಸುವ್ಯವಸ್ಥೆಯನ್ನು ಸ್ಮಾರ್ಟ್‌ ಆಗಿ ಪರಿವರ್ತಿಸುವತ್ತ ಹೆಚ್ಚಿನ ಗಮನ ಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹರಿಯಾಣದ ಸೂರಜ್‌ಕುಂಡ್‌ನಲ್ಲಿ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿಬಿರವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ತಂತ್ರಜ್ಞಾನದ ವೆಚ್ಚವು ಇತರ ವೆಚ್ಚಗಳನ್ನು ಉಳಿಸುತ್ತದೆ” ಎಂದಿದ್ದಾರೆ.

“ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ತಂತ್ರಜ್ಞಾನದ ವೆಚ್ಚವು ಇತರ ವೆಚ್ಚಗಳನ್ನು ಉಳಿಸುತ್ತದೆ. ತಂತ್ರಜ್ಞಾನವನ್ನು ಬಜೆಟ್‌ನೊಂದಿಗೆ ತೂಗಬೇಡಿ. ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಸುಧಾರಿಸಲು ಖರ್ಚು ಮಾಡಿ” ಎಂದು ರಾಜ್ಯಗಳ ಗೃಹ ಮಂತ್ರಿಗಳನ್ನು ಪ್ರಧಾನಿ ಒತ್ತಾಯಿಸಿದ್ದಾರೆ.

“ಸೂರಜ್‌ಕುಂಡ್‌ನಲ್ಲಿನ ಈ ಗೃಹ ಮಂತ್ರಿಗಳ ಚಿಂತನ ಶಿಬಿರವು ವಿಕೇಂದ್ರೀಕೃತ ಸಹಕಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಇದರ ಮೂಲಕ ರಾಜ್ಯಗಳು ಪರಸ್ಪರ ಕಲಿಯಬಹುದು, ಪರಸ್ಪರ ಸ್ಫೂರ್ತಿ ಪಡೆಯಬಹುದು ಮತ್ತು ದೇಶದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬಹುದು – ಇದು ಸಂವಿಧಾನದ ಭಾವನೆ ಮತ್ತು ನಮ್ಮ ನಾಗರಿಕರಿಗೆ ನೀಡಬೇಕಿರುವ ಕರ್ತವ್ಯವಾಗಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಅಗತ್ಯವಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ನಿಮ್ಮ ಆದ್ಯ ಕರ್ತವ್ಯವಾಗಿದೆ. ಇದಕ್ಕಾಗಿ ಪೊಲೀಸ್ ಪಡೆಗೆ ಸ್ಫೂರ್ತಿ ನೀಡುವುದು, ಯೋಜನೆ ರೂಪಿಸುವುದು ಮತ್ತು ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು” ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಸೂರಜ್‌ಕುಂಡ್‌ನಲ್ಲಿ ನಡೆದ ಎರಡು ದಿನಗಳ ಚಿಂತನ್ ಶಿಬಿರದಲ್ಲಿ ರಾಜ್ಯಗಳ ಗೃಹ ಸಚಿವರು, ಗೃಹ ಕಾರ್ಯದರ್ಶಿಗಳು, ಡಿಜಿಪಿಗಳು, ಸಿಎಪಿಎಫ್‌ಗಳು ಮತ್ತು ಸಿಪಿಒಗಳು ಭಾಗವಹಿಸಿದ್ದರು. ಪೊಲೀಸ್ ಪಡೆಗಳ ಆಧುನೀಕರಣ, ಮಹಿಳಾ ಸುರಕ್ಷತೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹಲವು ಕಾರ್ಯ ಸೂಚಿಗಳ ಕುರಿತು ಚಿಂತನ್‌ ಶಿಬಿರದಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!