ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ರಸ್ತೆ ಕಾಣದೇ 100 ಅಡಿ ಪ್ರಪಾತಕ್ಕೆ ಲಾರಿಯೊಂದು ಉರುಳಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸೋಮನಕಾಡು ಬಳಿ ಇಂದು ನಡೆದಿದೆ.
ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯು ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜಿನಿಂದ ರಸ್ತೆ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಸ್ಥಳೀಯರು ಧಾವಿಸಿ ಲಾರಿಯನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.