ಜಂಬೂಸವಾರಿಯಲ್ಲಿ ಜಾನಪದ ಕಲೆಗಳ ಕಲರವ: ಕಲಾವಿದರ ವೇಷಭೂಷಣ, ಕುಳಿತಗಳಿಗೆ ಮನಸೋತ ಪ್ರವಾಸಿಗರು!

ಹೊಸದಿಗಂತ ವರದಿ, ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದ ಕೊನೆ ದಿನವಾದ ಬುಧವಾರ ನಡೆದ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲೆಗಳ ಕಲರವ ಮೇಳೈಸಿತ್ತು. ನಾಡಿನ ನಾನಾ ಜಿಲ್ಲೆಗಳಿಂದ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಆಗಮಿಸಿದ ಕಲಾವಿದರು, ತಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವೇಷ ಭೂಷಣಗಳಿಂದ,ವಾದ್ಯಗಳಿo ದ ಕುಣಿದರು. ಕಲೆಗಳನ್ನು ಲಕ್ಷಾಂತರ ಮಂದಿ ಪ್ರವಾಸಿಗರು ಕಣ್ತುಂಬಿಕೊoಡರು.

ಮೊದಲಿಗೆ ನಂದಿಧ್ವಜ ಕುಣಿತ ನಡೆಯಿತು, ಅದರ ಹಿಂದೆ ವೀರಗಾಸೆ ಕಲಾವಿದರು ಅಬ್ಬರಿಸಿ ಕುಣಿದರು. ಪುರವಂತಿಕೆಯವರು ಗಮನ ಸೆಳೆದರು. ಕೊಂಬು ಕಹಳೆಯನ್ನು ಕಲಾವಿದರು ಮೊಳಗಿಸಿ ರಾಜರ ಕಾಲವನ್ನು ನೆನಪಿಗೆ ತಂದರು. ಕಂಸಾಳೆ ಕಲಾವಿದರ ನೆಲದ ಸೊಗಡಿನ ನೃತ್ಯವನ್ನು ಪ್ರಸ್ತುತಪಡಿಸಿದರು. ಪಟ ಕುಣಿತ, ಕೀಲು ಕುದುರೆ, ಕೋಲಾಟ, ಹೂವಿನ ನೃತ್ಯ ಕಣ್ಮನ ಸೆಳೆದವು. ಚಿಟ್ ಮೇಳ, ಕಣಿವಾದನ, ಹೆಜ್ಜೆಮೇಳ, ತಮಟೆ ನಗಾರಿ ನೋಡಗರನ್ನು ಹೆಜ್ಜೆ ಹಾಕಿ ಕುಣಿಯುವಂತೆ ಮಾಡಿದವು.

ಯಕ್ಷಗಾನಗೊಂಬೆಯಾಟ ಮೋಡಿ ಮಾಡಿತು. ಪೂಜಾ ಕುಣಿತ, ಕೀಲು ಕುದುರೆ, ಜಗ್ಗಲಗಿ ಮೇಳ, ಚಿಲಿಪಿಲಿ ಕುಣಿತ ಆಕರ್ಷಕವಾಗಿದ್ದವು. ದಟ್ಟಿ ಕುಣಿತ, ಕುಡುಬಿ ನೃತ್ಯ, ಗೊಂಡರ ಚಕ್ಕೆ, ಸಿಂಗಾರಿ ಮೇಳ, ಹಾಲಕ್ಕಿ ಸುಗ್ಗಿ ಕಣ್ತುಂಬಿಕೊoಡರೆ, ತಮಟೆ ವಾದನ ಕರ್ಣಾನಂದ ನೀಡಿತು. ಮುಳ್ಳು ಕುಣಿತ, ಸಮ್ಮಾಳ ಮೇಳ, ದಾಲಪಟ, ಕರಡಿ ಮಜಲು, ನಂದಿಕೋಲು ಕುಣಿತ, ಬಾಗಲಕೋಟೆಯ ಝಾಂಜ್ ಪಥಕ್, ಚಿನ್ನಿ ಕೋಲು, ವಿಜಯಪುರದ ಕೀಲು ಕುದುರೆ, ಸತ್ತಿಗೆ ಕುಣಿತ. ಧಾರವಾಡದ ಕಥಕಳಿ ಗೊಂಬೆ, ಉತ್ತರ ಕರ್ನಾಟಕದ ಜಾನಪದ ಸಂಸ್ಕೃತಿಯನ್ನು ಬಿಂಬಿಸಿ ಗಮನ ಸೆಳೆದವು. ಮಂಡ್ಯ ಜಿಲ್ಲೆಯ ದೊಣ್ಣೆ ವರಸೆ, ಕೋಲಾಟ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೇರ್ ನೃತ್ಯ, ಗೊರವರ ಕುಣಿತ, ಕೊಡಗಿನ ಮಲೆನಾಡು ಕುಣಿತ, ಬೆಂಗಳೂರಿನ ನವಿಲು ಕುಣಿತ, ಚಿತ್ರದುರ್ಗದ ಜಡೆ ಕೋಲಾಟ, ಚಿಕ್ಕಬಳ್ಳಾಪುರದ ಕೀಲು ಕುದುರೆ, ಚಿತ್ರದುರ್ಗದ ಉರುಮೆ ವಾದ್ಯ, ಕೊಡಗು ಜಿಲ್ಲೆಯ ಗಿರಿಜನರ ನೃತ್ಯ ಮನಸೊರೆಗೊಂಡವು.
ಶಿವಮೊಗ್ಗದ ಡೊಳ್ಳು ಕುಣಿತ, ಕಾರವಾರದ ಗುಮಟಪಾಂಗ, ಮೈಸೂರು ಜಿಲ್ಲೆಯ ನಂಜನಗೂಡಿನ ನಗಾರಿ ಕುಣಿತ, ಉಡುಪಿಯ ಕಂಗೀಲು ನೃತ್ಯ, ಮೈಸೂರಿನ ಮೂಡಲಪಾಯ ಯಕ್ಷಗಾನ, ಸ್ಯಾಕ್ಸ್ ಪೋನ್ ಮನಸೆಳೆದವು.

ಇನ್ನು ಜಂಬೂಸವಾರಿಯಲ್ಲಿ ಹೊರ ರಾಜ್ಯಗಳ ಕಲಾ ತಂಡಗಳು ಭಾಗವಹಿಸಿ, ತಮ್ಮ ನಾಡಿನ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಿ ಗಮನ ಸೆಳೆದವು. ಕೇರಳದ ಕಾಸರಗೂಡಿನ ಕೋಳಿ ನೃತ್ಯ, ಜಮ್ಮು ಮತ್ತು ಕಾಶ್ಮೀರದ ಡೋಂಗ್ರಿ ನೃತ್ಯ, ತಮಿಳುನಾಡಿನ ತಪ್ಪೆಟಂ ನೃತ್ಯ, ರಾಜಸ್ತಾನದ ಚಕ್ರಿ ಮತ್ತು ಗೂಮರ್ ನೃತ್ಯ, ಪಶ್ಚಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ ಗಮನ ಸೆಳೆದವು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!