April 19, 2026
Sunday, April 19, 2026
spot_img

ನಗರದ ವಿವಿಧೆಡೆ ಫುಡ್ ಕೋರ್ಟ್ ನಿರ್ಮಾಣ: ಸ್ಥಳ ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಶಾಸಕ ಪಪ್ಪಿ

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ನಗರದ ವಿವಿಧೆಡೆಗಳಲ್ಲಿ ಬೀದಿಬದಿ ಡಬ್ಬದ ಅಂಗಡಿಗಳನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ನಗರಸಭೆ ವತಿಯಿಂದ ಫುಡ್ ಕೋರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.

ನಗರದ ಕೆಳಕೋಟೆ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ಚಿತ್ರದುರ್ಗ ನಗರವನ್ನು ಅಭಿವೃದ್ಧಿ ಮಾಡುವುದೇ ನನ್ನ ಮೂಲ ಉದ್ದೇಶ. ನಗರದ ಅಂದವನ್ನು ಹೆಚ್ಚಿಸುವುದಕ್ಕೆ ಈಗಾಗಲೇ ರೂಪುರೇಷಗಳನ್ನು ತಯಾರಿಸಲಾಗಿದೆ. ನಗರದ ಅಭಿವೃದ್ಧಿಗೆ ಬೀದಿಬದಿ ವ್ಯಾಪಾರಸ್ಥರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರದ ಅಭಿವೃದ್ಧಿ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಅದರಂತೆ ಫುಡ್ ಕೋರ್ಟ್ ಮಳಿಗೆಗಳನ್ನು ನಿರ್ಮಾಣ ಮಾಡುವ ಕುರಿತಂತೆ ಚಿತ್ರದುರ್ಗ ನಗರದ ಕೆಲವು ಸ್ಥಳಗಳನ್ನು ಭೇಟಿ ಮಾಡಲಾಗಿದೆ. ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಇಟ್ಟಿರುವಂತಹ ಡಬ್ಬಗಳ ಅಂಗಡಿಗಳನ್ನು ತೆರವುಗೊಳಿಸಿ, ಅವರಿಗೆ ಸುಸಜ್ಜಿತವಾದ ಫುಡ್ ಕೋರ್ಟ್‌ಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಇದಕ್ಕೆ ತಮ್ಮೆಲ್ಲರ ಒಪ್ಪಿಗೆ ಅವಶ್ಯಕವಾಗಿದೆ ಎಂದು ಹೇಳಿದರು.

ಕೆಳಗೋಟೆಯ ಸರಸ್ವತಿ ಕಾನೂನು ಕಾಲೇಜು ಮುಂಭಾಗದಲ್ಲಿರುವ ಡಬ್ಬ ಅಂಗಡಿಗಳನ್ನು ತರವುಗೊಳಿಸಿ ಫುಡ್ ಕೋರ್ಟ್ ಮಳಿಗೆಯನ್ನು ತೆರೆಯಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಒಂದೇ ಸೂರಿನ ಅಡಿಯಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಒಳಗೊಂಡಂತೆ ಫುಡ್ ಕೋರ್ಟ್ ಮಳಿಗೆ ನಿರ್ಮಿಸಿ ಕೊಡಲಾಗುತ್ತಿದೆ. ಇದರಿಂದ ಅಂಗಡಿಯ ಮಾಲೀಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಚಿತ್ರದುರ್ಗ ನಗರ ಅಷ್ಟೇ ಅಲ್ಲದೇ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಾದ್ಯಂತ ಮುಂದಿನ ದಿನಗಳಲ್ಲಿ ಭೇಟಿ ಮಾಡಿ ಉಳಿದಿರುವ ಅಭಿವೃದ್ಧಿ ಕಾರ್ಯಗಳಿಗೆ ಹೆಜ್ಜೆ ಇಡಲಾಗುತ್ತದೆ. ಚಿತ್ರದುರ್ಗ ನಗರದ ಬಹುದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸಲು ಪಣ ತೊಟ್ಟಿದ್ದೇನೆ. ಚಿತ್ರದುರ್ಗ ನಗರಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಕೂಡ ಆಗಮಿಸುತ್ತಿದ್ದಾರೆ. ಇದರಿಂದ ಚಿತ್ರದುರ್ಗದ ನಗರದ ಬಗ್ಗೆ ದೇಶ ವಿದೇಶಗಳಲ್ಲಿಯೂ ಸಹ ಮಾತನಾಡುತ್ತಾರೆ. ಹಾಗಾಗಿ ಚಿತ್ರದುರ್ಗ ನಗರವನ್ನು ಒಂದು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೆಳಗೋಟೆಯ ಬೋವಿ ಕಾಲೋನಿಯಲ್ಲಿ ಹರಿದು ಹೋಗುತ್ತಿರುವ ರಾಜಕಾಲುವೆಗೆ ಕೆಲವು ಕಡೆ ತಡೆಗೋಡೆಗಳು ಕುಸಿದಿವೆ. ಕಾಲೋನಿಯ ಸಣ್ಣಪುಟ್ಟ ಮಕ್ಕಳು ರಾಜಕಾಲುವೆ ಅಕ್ಕಪಕ್ಕದಲ್ಲಿ ಆಟವಾಡುತ್ತಿರುತ್ತವೆ. ಇದರಿಂದಾಗಿ ಸಾಕಷ್ಟು ಭಯಭೀತರಾಗಿದ್ದೇವೆ. ತಕ್ಷಣವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ರಾಜಕಾಲವೆಗೆ ಕಬ್ಬಿಣದ ಜಲ್ಡಿಯಿಂದ ಮುಚ್ಚಬೇಕು ಎಂದು ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನಗರಸಭೆ ಪೌರಯುಕ್ತರನ್ನು ಸ್ಥಳಕ್ಕೆ ಕರೆಸಿ ಇಲ್ಲಿನ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಕೆಳಗೋಟೆ ನಿವಾಸಿಗಳಾದ ಸುರೇಶ್, ಮಲ್ಲಿಕಾರ್ಜುನ್, ರವಿಕುಮಾರ್, ಸುಜಾತಮ್ಮ, ಲಕ್ಷ್ಮಮ್ಮ, ಮಂಜಮ್ಮ, ಓಬಣ್ಣ, ಖಾಲೀಲ್, ರಾಜಣ್ಣ, ಪ್ರಸನ್ನ, ಶ್ವೇತ, ನಾಗರತ್ನ, ರವಿ, ಮಂಜುನಾಥ್, ನಾಗರಾಜ್ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !