August 23, 2026
Sunday, August 23, 2026
spot_img

FOOD | ಸಕತ್ ಟೇಸ್ಟಿ ಸೋಯಾ ಚಂಕ್ಸ್ ಫ್ರೈ ತಿಂದಿದ್ದೀರಾ? ರೆಸಿಪಿ ಇಲ್ಲಿದೆ

ಸೋಯಾ ಬೀನ್ ಹಾಗೂ ಸೋಯಾ ಹಾಲಿನಂತೆ ಸೋಯಾ ಚಂಕ್ಸ್‌ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪ್ರೋಟೀನ್‌ ಅಧಿಕವಾಗಿರುವುದರಿಂದ ಇದು ಶಾಕಹಾರಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಪಲಾವ್, ಟೊಮೆಟೋ ಬಾತ್‌ ಅಥವಾ ಸೈಡ್ ಡಿಶ್‌ನಂತೆ ಬಳಸಬಹುದು. ಹಾಗೆಯೇ ಸಂಜೆಯ ತಿಂಡಿಗೆ ಸ್ನ್ಯಾಕ್ಸ್ ಆಗಿಯೂ ಇದನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ಸೋಯಾ ಚಂಕ್ಸ್ – 2 ಕಪ್
ಈರುಳ್ಳಿ – 1
ಕ್ಯಾಪ್ಸಿಕಮ್ – 1
ಶುಂಠಿ – ಅರ್ಧ ಇಂಚು
ಬೆಳ್ಳುಳ್ಳಿ – 4 ಕಾಯಿ
ಜೀರಿಗೆ – 1 ಚಮಚ
ಟೊಮೆಟೋ – 2
ಸೋಯಾ ಸಾಸ್ – ½ ಚಮಚ
ಅರಿಶಿಣ – ¼ ಚಮಚ
ಖಾರದ ಪುಡಿ – 1 ಚಮಚ
ಧನಿಯಾ ಪುಡಿ – ½ ಚಮಚ
ಜೀರಿಗೆ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಅದಕ್ಕೆ ಸೋಯಾ ಚಂಕ್ಸ್ ಹಾಕಿ ಮುಚ್ಚಳ ಮುಚ್ಚಿ 8 ನಿಮಿಷ ಬೇಯಿಸಬೇಕು. ನಂತರ ಮತ್ತೊಂದು ಪಾತ್ರೆಯಲ್ಲಿ ತಣ್ಣೀರು ಹಾಕಿ ಅದಕ್ಕೆ ಬೇಯಿಸಿದ ಸೋಯಾ ಚಂಕ್ಸ್ ಹಾಕಿ ಆರಲು ಬಿಡಬೇಕು.

ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ ಹಾಕಿ. ನಂತರ ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಈರುಳ್ಳಿ ಬಂಗಾರದ ಬಣ್ಣಕ್ಕೆ ಬಂದಾಗ ಕ್ಯಾಪ್ಸಿಕಮ್ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಬೇಕು.

ನಂತರ ಟೊಮೆಟೋ ಹಾಕಿ ಅದು ಚೆನ್ನಾಗಿ ಬೇಯುವವರೆಗೂ ಫ್ರೈ ಮಾಡಬೇಕು. ಈಗ ಅರಿಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಸೋಯಾ ಸಾಸ್ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಬೇಕು.

ತಣ್ಣೀರಿನಲ್ಲಿದ್ದ ಸೋಯಾ ಚಂಕ್ಸ್ ತೆಗೆದು ನೀರು ಸಂಪೂರ್ಣ ಹಿಂಡಿ ಬಾಣಲೆಗೆ ಹಾಕಿ ಎಲ್ಲವನ್ನೂ ಮಿಶ್ರಣ ಮಾಡಿ. ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಬೇಕು.

ನೀರು ಸಂಪೂರ್ಣವಾಗಿ ಇಂಗಿದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸೋಯಾ ಚಂಕ್ಸ್ ಫ್ರೈ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !