September 20, 2026
Sunday, September 20, 2026
spot_img

FOOD | ಶೀತ, ಕೆಮ್ಮು, ಜ್ವರಕ್ಕೆ ಬೆಸ್ಟ್ ಮನೆಮದ್ದು ಈ ‘ಕಾಳು ಮೆಣಸಿನ ಸಾರು’: 10 ನಿಮಿಷದಲ್ಲಿ ರೆಡಿ

ಕಾಳು ಮೆಣಸಿನ ಸಾರು ಶೀತ, ಕೆಮ್ಮು, ಜ್ವರ ಮತ್ತು ಮಳೆಗಾಲದ ಸಮಯದಲ್ಲಿ ಕುಡಿಯಲು ಅತ್ಯಂತ ಉತ್ತಮವಾದ ಹಾಗೂ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಅದ್ಭುತ ಆಯುರ್ವೇದ ಮನೆಮದ್ದಾಗಿದೆ. ಬಿಸಿ ಬಿಸಿ ಅನ್ನದೊಂದಿಗೆ ಉಣ್ಣಲು ಅಥವಾ ಸೂಪ್‌ನಂತೆ ಕುಡಿಯಲು ಇದು ಅತ್ಯಂತ ರುಚಿ ನೀಡುತ್ತದೆ.

ಬೇಕಾಗುವ ಸಾಮಾಗ್ರಿಗಳು:

ಕಾಳು ಮೆಣಸು
ಜೀರಿಗೆ
ಟೊಮೆಟೊ
ಹುಣಸೆಹಣ್ಣು
ಬೆಳ್ಳುಳ್ಳಿ
ಕರಿಬೇವಿನ ಸೊಪ್ಪು
ಕೊತ್ತಂಬರಿ ಸೊಪ್ಪು
ಅರಿಶಿನ ಪುಡಿ
ಬೆಲ್ಲ
ಉಪ್ಪು
ನೀರು
ತುಪ್ಪ ಅಥವಾ ಎಣ್ಣೆ
ಸಾಸಿವೆ
ಕೆಂಪು ಮೆಣಸಿನಕಾಯಿ
ಇಂಗು

ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರಿಗೆ ಅಥವಾ ಕುಟ್ಟುವ ಕಲ್ಲಿಗೆ ಕಾಳು ಮೆಣಸು ಮತ್ತು ಜೀರಿಗೆಯನ್ನು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಹೆಚ್ಚಿದ ಟೊಮೆಟೊ, ಹುಣಸೆಹಣ್ಣಿನ ರಸ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಕರಿಬೇವಿನ ಸೊಪ್ಪು ಹಾಕಿ ಕೈಯಿಂದಲೇ ಚೆನ್ನಾಗಿ ಕಿವುಚಿಕೊಂಡ ನಂತರ ಇದಕ್ಕೆ 2 ರಿಂದ 3 ಕಪ್ ನೀರು ಮತ್ತು ಒಂದು ಸಣ್ಣ ಬೆಲ್ಲದ ತುಂಡನ್ನು ಸೇರಿಸಿ ಮಿಕ್ಸ್ ಮಾಡಬೇಕು. ಈಗ ಈ ಪಾತ್ರೆಯನ್ನು ಒಲೆಯ ಮೇಲಿಟ್ಟು 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಹುಣಸೆಹಣ್ಣು ಮತ್ತು ಟೊಮೆಟೊದ ಹಸಿ ವಾಸನೆ ಹೋಗುವವರೆಗೆ ಬೇಯಿಸಬೇಕು.

ಬಳಿಕ ಸಾರು ಕುದಿ ಬಂದ ನಂತರ, ಮೊದಲೇ ಸಿದ್ಧಪಡಿಸಿಟ್ಟುಕೊಂಡ ಮೆಣಸು-ಜೀರಿಗೆ ಪುಡಿ ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು. ಮಸಾಲೆ ಹಾಕಿದ ನಂತರ ಸಾರನ್ನು ಕೇವಲ 2 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ ಸಾರಿನ ಮೇಲ್ಭಾಗದಲ್ಲಿ ನೊರೆ ಬರಲು ಆರಂಭಿಸಿದಾಗ ಗ್ಯಾಸ್ ಆಫ್ ಮಾಡಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಒಂದು ಸಣ್ಣ ಒಗ್ಗರಣೆ ಸೌಟಿನಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಸಾಸಿವೆ, ಒಣ ಮೆಣಸಿನಕಾಯಿ, ಇಂಗು ಮತ್ತು ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ, ಅದನ್ನು ತಕ್ಷಣವೇ ಸಾರಿಗೆ ಸೇರಿಸಿ ಮುಚ್ಚಳ ಮುಚ್ಚಿದರೆ ಬಿಸಿಬಿಸಿಯಾದ, ಘಮಘಮಿಸುವ ಕಾಳು ಮೆಣಸಿನ ಸಾರು ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !