ಭಾನುವಾರದ ವಿಶೇಷ ಊಟ ಎಂದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಮಸಾಲೆ ಘಮಘಮಿಸುವ ನಾನ್-ವೆಜ್ ಅಡುಗೆ. ಆದರೆ, ಸಸ್ಯಾಹಾರಿಗಳಿಗೂ ನಾನ್-ವೆಜ್ ಶೈಲಿಯಲ್ಲೇ ಅದ್ಭುತ ರುಚಿ ಮತ್ತು ಪೌಷ್ಟಿಕಾಂಶ ನೀಡುವ ಏಕೈಕ ಸೂಪರ್‌ಫುಡ್ ಎಂದರೆ ಅದು ‘ಅಣಬೆ’. ಅಪ್ಪಟ ಹಳ್ಳಿ ಶೈಲಿಯ ಮಸಾಲೆಗಳನ್ನು ಬಳಸಿ, ಹದವಾಗಿ ಕರಗುವಂತೆ ಮಾಡುವ ಈ ‘ಅಣಬೆ ಮಸಾಲಾ ಫ್ರೈ’ ಚಪಾತಿ, ಪೂರಿ ಅಥವಾ ಗೀ ರೈಸ್ ಜೊತೆಗೆ ಸವಿಯಲು ಅದ್ಭುತವಾಗಿರುತ್ತದೆ.
ಬೇಕಾಗುವ ಪದಾರ್ಥಗಳು:
ಅಣಬೆ (ಮಶ್ರೂಮ್)
ಈರುಳ್ಳಿ
ಟೊಮೆಟೊ
ಹಸಿಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಅರಿಶಿನ ಪುಡಿ
ಅಚ್ಚ ಖಾರದ ಪುಡಿ
ಧನಿಯಾ ಪುಡಿ
ಕಾಳು ಮೆಣಸಿನ ಪುಡಿ
ಗರಂ ಮಸಾಲಾ ಪೌಡರ್
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ
ಉಪ್ಪು
ತುರಿದ ಹಸಿ ಕೊಬ್ಬರಿ
ಗಸಗಸೆ
ಗೋಡಂಬಿ
ಮಾಡುವ ವಿಧಾನ
ಮದಲು ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಂಡು. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ಅದು ತಿಳಿ ಚಿನ್ನದ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಅದರ ಹಸಿ ವಾಸನೆ ಹೋಗುವವರೆಗೆ 1 ನಿಮಿಷ ಹುರಿಯಬೇಕು. ಆಮೇಲೆ ಹೆಚ್ಚಿದ ಟೊಮೆಟೊವನ್ನು ಹಾಕಿ, ಅದು ಸಂಪೂರ್ಣವಾಗಿ ಮೃದುವಾಗಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಬೇಯಿಸಿಕೊಂಡು.ಆ ಮಿಶ್ರಣಕ್ಕೆ ಅರಿಶಿನ, ಅಚ್ಚ ಖಾರದ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲವನ್ನು ಸೇರಿಸಿ ಸಣ್ಣ ಉರಿಯಲ್ಲಿ 1 ನಿಮಿಷ ಲಘುವಾಗಿ ಕೈಯಾಡಿಸಿ. ಹೆಚ್ಚಿಟ್ಟ ಅಣಬೆ ತುಂಡುಗಳನ್ನು ಬಾಣಲೆಗೆ ಹಾಕಿ ಮಸಾಲೆಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಲು ಬಿಡಬೇಕು.
ಅಣಬೆ ತನ್ನದೇ ನೀರಿನಲ್ಲಿ ಅರ್ಧದಷ್ಟು ಬೇಯುತ್ತದೆ. ನಂತರ ಮುಚ್ಚಳವನ್ನು ತೆಗೆದು, ಮೊದಲೇ ಸಿದ್ಧಪಡಿಸಿಟ್ಟುಕೊಂಡ ತೆಂಗಿನಕಾಯಿ-ಗೋಡಂಬಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಮಸಾಲೆಯ ಹಸಿ ವಾಸನೆ ಹೋಗಿ, ಎಣ್ಣೆ ಮೇಲ್ಭಾಗಕ್ಕೆ ತೇಲುವವರೆಗೆ ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಘಮಘಮಿಸುವ ಭಾನುವಾರದ ವಿಶೇಷ ‘ಅಣಬೆ ಮಸಾಲಾ ಫ್ರೈ’ ಸವಿಯಲು ಸಿದ್ಧವಾಗುತ್ತದೆ.



