ಸಂಜೆ ಹೊತ್ತಿನಲ್ಲಿ ಹಸಿವಾದಾಗ ಚಿಪ್ಸ್ ಕರಿದ ತಿಂಡಿ ತಿನ್ನುವ ಬದಲು ಆರೋಗ್ಯಕರ ಹಾಗೂ ಹೊಟ್ಟೆ ತುಂಬಿಸುವ ತಿಂಡಿ ಸವಿಯೋದು ಉತ್ತಮ. ಓಟ್ಸ್ನಲ್ಲಿ ನಾರಿನಾಂಶ ಹೆಚ್ಚಿದ್ದು, ತರಕಾರಿಗಳೊಂದಿಗೆ ತಯಾರಿಸಿದ ಓಟ್ಸ್ ಉಪ್ಮಾ ರುಚಿಕರವಾಗಿರುವುದರ ಜೊತೆಗೆ ಪೌಷ್ಟಿಕವೂ ಆಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು
ಓಟ್ಸ್ – 1 ಕಪ್
ಎಣ್ಣೆ ಅಥವಾ ತುಪ್ಪ – 2 ಚಮಚ
ಸಾಸಿವೆ ಮತ್ತು ಜೀರಿಗೆ – ತಲಾ ½ ಚಮಚ
ಕಡಲೆ ಬೇಳೆ ಮತ್ತು ಉದ್ದಿನ ಬೇಳೆ – ತಲಾ 1 ಚಮಚ
ಈರುಳ್ಳಿ – 1, ಸಣ್ಣಗೆ ಹೆಚ್ಚಿದ
ಹಸಿಮೆಣಸಿನಕಾಯಿ – 2–3
ಹಸಿ ತರಕಾರಿಗಳು – ½ ಕಪ್
ಶುಂಠಿ – ಸ್ವಲ್ಪ
ಕರಿಬೇವಿನ ಸೊಪ್ಪು – ಸ್ವಲ್ಪ
ಅರಿಶಿನ ಪುಡಿ – 1 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ನೀರು – 1½ ಕಪ್
ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಬಾಣಲೆಯಲ್ಲಿ ಓಟ್ಸ್ ಅನ್ನು ಸಣ್ಣ ಉರಿಯಲ್ಲಿ ಸುವಾಸನೆ ಬರುವವರೆಗೆ ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ. ನಂತರ ಕರಿಬೇವಿನ ಸೊಪ್ಪು, ಶುಂಠಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಬಾಡಿಸಿ. ಇದಕ್ಕೆ ಕ್ಯಾರೆಟ್, ಬೀನ್ಸ್ ಮತ್ತು ಬಟಾಣಿಯಂತಹ ತರಕಾರಿಗಳನ್ನು ಸೇರಿಸಿ 2 ನಿಮಿಷ ಹುರಿಯಿರಿ.
ನಂತರ ನೀರು, ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಕುದಿಸಿ. ತರಕಾರಿಗಳು ಸ್ವಲ್ಪ ಬೆಂದ ಬಳಿಕ ಹುರಿದ ಓಟ್ಸ್ ಅನ್ನು ನಿಧಾನವಾಗಿ ಸೇರಿಸುತ್ತಾ ಕೈಯಾಡಿಸಿ. ಉರಿಯನ್ನು ಸಣ್ಣ ಮಾಡಿ ಮುಚ್ಚಳ ಮುಚ್ಚಿ 2–3 ನಿಮಿಷ ಬೇಯಿಸಿ. ಓಟ್ಸ್ ನೀರನ್ನು ಹೀರಿಕೊಂಡು ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಕೊನೆಯಲ್ಲಿ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿದರೆ ರುಚಿಕರವಾದ ಓಟ್ಸ್ ಉಪ್ಮಾ ಸವಿಯಲು ಸಿದ್ಧ.



