ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ

ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಹೊರವಲಯದ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಬಳಿ ಗುರುತಿಸಲಾಗಿರುವ ಜಾಗದಲ್ಲಿ ಸರ್ಕಾರಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೊಡಗು ಜಿಲ್ಲಾ ಪ್ರಾಣಿ ದಯಾ ಸಂಘದ ಸಹಕಾರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಪ್ರತೀ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಲು 15 ಕೋಟಿ ರೂ. ನಿಗದಿ ಮಾಡಿದ್ದು, ಮೊದಲ ಹಂತದಲ್ಲಿ ಸರ್ಕಾರ 36 ಲಕ್ಷ ರೂ. ಬಿಡುಗಡೆ ಮಾಡಿದೆ ಎಂದರು.
ವಯಸ್ಸಾದ ಗೋವುಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಸರ್ಕಾರದಿಂದ ನಡೆಸುವ ಗೋಶಾಲೆಗೆ ಅವುಗಳನ್ನು ಬಿಡುವಂತಾಗಬೇಕು. ಗೋವುಗಳನ್ನು ಸರ್ಕಾರದ ವತಿಯಿಂದ ನೋಡಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಗೋಶಾಲೆ ಆರಂಭಿಸುವುದು ಸರ್ಕಾರದ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಆ ನಿಟ್ಟಿನಲ್ಲಿ ಗೋವುಗಳ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಿದೆ ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದರು.
ಜನಪರ ಕಾರ್ಯಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ 6 ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಶ್ರೀಸಾಮಾನ್ಯರು, ಕೃಷಿಕರು ಎಲ್ಲಾ ಬಡವರ್ಗದ ಜನರ ಶ್ರೇಯೋಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿ, ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಎಂದು ಹೇಳಿದರು.
ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಸುರೇಶ್ ಭಟ್ ಅವರು ಮಾಹಿತಿ ನೀಡಿ ಕೊಡಗು ಜಿಲ್ಲೆಯಲ್ಲಿ 2020ರ ಗಣತಿಯಂತೆ ಜಿಲ್ಲೆಯಲ್ಲಿ ಒಟ್ಟು 77 ಸಾವಿರ ಜಾನುವಾರುಗಳಿದ್ದು, ಇದರ ಕನಿಷ್ಟ ಶೇ.0.75 ರಷ್ಟು, ಹೆಚ್ಚು ಕಡಿಮೆ 500 ಜಾನುವಾರುಗಳನ್ನಾದರೂ ಸಾಕುವಷ್ಟು ಅವಕಾಶವಿರುವ ಹಟ್ಟಿಯ ರಚನೆ ಮತ್ತು ಇತರ ಮೂಲಭೂತ ಸೌಕರ್ಯಗಳ ಅವಶ್ಯಕತೆಯಿದ್ದು, ಈ ಸಂಬಂಧ ಅಗತ್ಯ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದರು.
ಪ್ರಸ್ತುತ ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ 50 ಜಾನುವಾರುಗಳಿಗೆ ಸಾಕಾಗುವ ಹಟ್ಟಿ, ಕೊಳವೆಬಾವಿ, ಟ್ಯಾಂಕ್, ವಿದ್ಯುತ್ ವ್ಯವಸ್ಥೆ, ಗೇಟ್, ಕೆಲಸಗಾರರ ಕೊಠಡಿ, ಗೊಬ್ಬರದ ಗುಂಡಿ, ಸಿಸಿಟಿವಿ., ಹುಲ್ಲುಗಾವಲು ಪ್ರದೇಶಕ್ಕೆ ಬೇಲಿ ಮತ್ತಿತರ ಸೇರಿಸಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತದಿಂದ 8 ಎಕರೆ ಜಾಗ ಗೋಶಾಲೆಗೆ ಮಂಜೂರಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸ್ಥಳೀಯರಾದ ಎಂ.ಬಿ.ದೇವಯ್ಯ ಅವರು ಈಗಾಗಲೇ ಕೆ.ನಿಡುಗಣೆ ಗ್ರಾ.ಪಂ.ಬಳಿ ಗುರುತಿಸಿರುವ ಜಾಗದಲ್ಲಿ 20 ಎಕರೆ ಗೋಮಾಳ ಜಾಗವಿದ್ದು, ಸಂಪೂರ್ಣವಾಗಿ ಗೋಶಾಲೆಗೆ ಕಾಯ್ದಿರಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ, ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷ ಕೆ.ಕೆ.ಅಯ್ಯಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಕೆ.ನಿಡುಗಣೆ ಗ್ರಾ.ಪಂ.ಸದಸ್ಯರು, ಪ್ರಾಣಿ ದಯಾ ಸಂಘದ ಸದಸ್ಯರು, ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!