‘ಕಬ್ಜ’ ಸೆಟ್ ನಿರ್ಮಾಣಕ್ಕೆ ಕೋಟಿ-ಕೋಟಿ ಖರ್ಚು ಮಾಡಿದ ಚಂದ್ರು ತಂಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಬ್ಜ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ಸಖತ್ ಸದ್ದು ಮಾಡಿದ್ದು, ಸಿನಿಮಾದ ಪ್ರಚಾರ ಭರ್ಜರಿಯಾಗಿ ಸಾಗುತ್ತಿದ್ದು ಭಾರತದ ಬಹುನಿರೀಕ್ಷಿತ ಸಿನಿಮಾ ಸಾಲಿಗೆ ಕಬ್ಜ ಸೇರಿಕೊಂಡಿದೆ. ಸ್ವಾತಂತ್ರ್ಯಪೂರ್ವದ ಕತೆಯನ್ನು ‘ಕಬ್ಜ’ ಸಿನಿಮಾಕ್ಕಾಗಿ ಆರ್. ಚಂದ್ರು ಹೆಣೆದಿದ್ದು, ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಸೆಟ್​ಗಳಲ್ಲಿಯೇ ಮಾಡಿ ಮುಗಿಸಿದ್ದಾರೆ.
ಕೆಲವು ಅದ್ಧೂರಿ ಸೆಟ್​ಗಳನ್ನು ಈ ಸಿನಿಮಾಕ್ಕಾಗಿ ಚಿತ್ರತಂಡ ನಿರ್ಮಿಸಿದ್ದು ಸೆಟ್ ನಿರ್ಮಾಣಕ್ಕೆ ಹಲವು ಕೋಟಿಗಳನ್ನು ಖರ್ಚು ಮಾಡಲಾಗಿದೆ.

ಸ್ವಾತಂತ್ರ್ಯಪೂರ್ವದ ಕತೆಯಾದ್ದರಿಂದ ಆಗಿನ ಕಾಲದ ಫೀಲ್ ನೀಡಲು ಹಳೆಯ ಜಮಾನಾ ಹೋಲುವ ಸೆಟ್​ಗಳನ್ನು ಚಿತ್ರತಂಡ ನಿರ್ಮಿಸಿದೆ. ಚಿತ್ರತಂಡ ನೀಡಿರುವ ಮಾಹಿತಿಯಂತೆ ಕಬ್ಜ ಸಿನಿಮಾಕ್ಕಾಗಿ ಬರೋಬ್ಬರಿ 45 ಸೆಟ್​ಗಳನ್ನು ನಿರ್ಮಾಣ ಮಾಡಲಾಗಿತ್ತಂತೆ!

ಸಿನಿಮಾಗಳಿಗೆ ಒಂದು ದೊಡ್ಡ ಸೆಟ್ ಹಾಕುವುದು ಮಾಮೂಲು ಆದರೆ ‘ಕಬ್ಜ’ ಸಿನಿಮಾಕ್ಕಾಗಿ ಬರೋಬ್ಬರಿ 30 ದೊಡ್ಡ ಸೆಟ್​ಗಳು ಹಾಗೂ 15 ಸಣ್ಣ ಸೆಟ್​ಗಳನ್ನು ನಿರ್ಮಿಸಿ ಅದರಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾರುಕಟ್ಟೆಯ ಸೆಟ್, ಅರಮನೆಯ ಸೆಟ್, ಹಳೆಯ ಕಾಲದ ಬೀದಿಯ ಸೆಟ್, ಮಾಂಸದ ಮಾರುಕಟ್ಟೆಯ ಸೆಟ್ ಹೀಗೆ ಹಲವು ಸೆಟ್​ಗಳನ್ನು ಸಿನಿಮಾಕ್ಕಾಗಿ ಹಾಕಲಾಗಿತ್ತು. ಸೆಟ್ ಅಥವಾ ಚಿತ್ರೀಕರಣದ ದೃಶ್ಯಗಳು ಲೀಕ್ ಆಗದಂತೆ ತಡೆಯಲು ಸೆಟ್​ನಲ್ಲಿ ಮೊಬೈಲ್ ಬ್ಯಾನ್ ಮಾಡಿತ್ತು ಚಿತ್ರತಂಡ.

ಸಿನಿಮಾದ ಕತೆಯು 1945 ರಿಂದ 1985 ರ ವರೆಗೂ ನಡೆಯುವ ಕಾರಣ ಸ್ವಾತಂತ್ರಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಭಾರತವನ್ನು ತೋರಿಸುವ ಭಿನ್ನ-ಭಿನ್ನ ಸೆಟ್​ಗಳನ್ನು ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ತಂಡ ನಿರ್ಮಿಸಿತ್ತು.

ಬೆಂಗಳೂರು ಹಾಗೂ ಮಂಗಳೂರಲ್ಲಿ ಸಿನಿಮಾಕ್ಕಾಗಿ ಸೆಟ್​ಗಳನ್ನು ಹಾಕಲಾಗಿದ್ದು, ಕೇವಲ ಸೆಟ್ ನಿರ್ಮಾಣಕ್ಕೆ ಸುಮಾರು 20 ಕೋಟಿ ಹಣವನ್ನು ಚಿತ್ರತಂಡ ಖರ್ಚು ಮಾಡಿದೆ. ಕಲಾ ನಿರ್ದೇಶಕ ಶಿವಕುಮಾರ್ ಕೇಳಿದ್ದೆಲ್ಲವನ್ನೂ ನಿರ್ಮಾಪಕರು ನೀಡಿದ್ದು, ಅದಕ್ಕೆ ತಕ್ಕಂತೆ ಅದ್ಧೂರಿ ಸೆಟ್​ಗಳನ್ನು ಶಿವಕುಮಾರ್ ಹಾಗೂ ತಂಡ ನಿರ್ಮಿಸಿ ಕೊಟ್ಟಿದ್ದಾರೆ.

ಸಿನಿಮಾವು ಮಾರ್ಚ್ 17ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!