ಕೊಡಗಿನ ಪುಣ್ಯ ಕ್ಷೇತ್ರಗಳನ್ನು ಟೆಂಪಲ್ ಟೌನ್ ಗಳೆಂದು ಘೋಷಿಸಲು ಒತ್ತಾಯ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ ಹಾಗೂ ಪಾಡಿ ಇಗ್ಗುತಪ್ಪ ಕ್ಷೇತ್ರಗಳನ್ನು ‘ದೇವಸ್ಥಾನ ಪಟ್ಟಣ’ (ಟೆಂಪಲ್ ಟೌನ್) ಅಥವಾ ‘ತೀರ್ಥಕ್ಷೇತ್ರ’ವೆಂದು ಪರಿಗಣಿಸಬೇಕು ಮತ್ತು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಡಬೇಕು ಎಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಕೋರಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿತು.
ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಂದ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಭಾಗಮಂಡಲ, ತಲಕಾವೇರಿ, ಪಾಡಿ ಇಗ್ಗುತ್ತಪ್ಪ ಪವಿತ್ರ ಕ್ಷೇತ್ರಗಳನ್ನು ದೇವಸ್ಥಾನ ಪಟ್ಟಣ ಅಥವಾ ತೀರ್ಥಕ್ಷೇತ್ರವೆಂದು ಪರಿಗಣಿಸುವಲ್ಲಿ ಮತ್ತೊಂದು ಸಭೆ ಆಹ್ವಾನಿಸಲಾಗುವುದು, ಭಾಗಮಂಡಲ ಗ್ರಾ.ಪಂ.ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು. ಹಾಗೆಯೇ ಸ್ಥಳೀಯ ಎಲ್ಲಾ ಹಂತದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ಸ್ಥಳೀಯರ ವಿಶ್ವಾಸ ಪಡೆಯುವುದು, ವಸ್ತ್ರ ಸಂಹಿತೆ ಜಾರಿಗೊಳಿಸುವುದು, ಭದ್ರತೆ ಹೆಚ್ಚಿಸಬೇಕಿದೆ. ಜೊತೆಗೆ ಮದ್ಯ ಮಾರಾಟ ಮಳಿಗೆ ಸ್ಥಳಾಂತರ ಬಗ್ಗೆ ನಿಯಮಾನುಸಾರ ಕ್ರಮವಹಿಸಲಾಗುವುದು. ದೇವಸ್ಥಾನ ನಗರ ಅಥವಾ ತೀರ್ಥ ಕ್ಷೇತ್ರವೆಂದು ಪರಿಗಣಿಸುವಲ್ಲಿ ಎಲ್ಲರ ಅಭಿಪ್ರಾಯ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಸಭೆಯ ಆರಂಭದಲ್ಲಿ ಮಾತನಾಡಿದ ಪ್ರಮುಖರಾದ ಎಂ.ಬಿ.ದೇವಯ್ಯ ಅವರು, ಭಾಗಮಂಡಲ, ತಲಕಾವೇರಿ, ಇಗ್ಗುತ್ತಪ್ಪ, ಓಂಕಾರೇಶ್ವರ ಹಾಗೂ ಇರ್ಪು ರಾಮೇಶ್ವರ ದೇವಾಲಯ ಪ್ರದೇಶವನ್ನು ದೇವಸ್ಥಾನ ನಗರಿ ಅಥವಾ ತೀರ್ಥಕ್ಷೇತ್ರವೆಂದು ಪರಿಗಣಿಸುವಂತಾಗಬೇಕು ಎಂದು ಮನವಿ ಮಾಡಿದರು.
ಪವಿತ್ರ ಕ್ಷೇತ್ರದಲ್ಲಿ ಅಪವಿತ್ರ ನಡೆಯುತ್ತಿದ್ದು, ಪವಿತ್ರ ಕ್ಷೇತ್ರಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಗಂಗೆಯಷ್ಟೇ ಪವಿತ್ರ ಕಾವೇರಿ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಉಳ್ಳಿಯಡ ಎಂ.ಪೂವಯ್ಯ ಅವರು ಮಾತನಾಡಿ, ತಲಕಾವೇರಿ ಭಾಗಮಂಡಲದಲ್ಲಿ ಮದ್ಯ, ಮಾಂಸದ ಅಂಗಡಿ ತೆರೆದು ಅಶುಚಿತ್ವ ಉಂಟಾಗಿದೆ. ಇದರಿಂದ ಭಕ್ತಾದಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಆದ್ದರಿಂದ ದೇವಾಲಯಗಳ/ ತೀರ್ಥಕ್ಷೇತ್ರದ ಊರು, ಪಟ್ಟಣವೆಂದು ಪ್ರಕಟಿಸಲು ಅಗತ್ಯ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ರವಿ ಚಂಗಪ್ಪ ಅವರು ಮಾತನಾಡಿ, ಭಾಗಮಂಡಲ, ತಲಕಾವೇರಿ, ತಣ್ಣಿಮಾನಿ, ಚೇರಂಗಾಲ, ಕೋರಂಗಾಲ ಸೇರಿದಂತೆ ಸುಮಾರು 800 ಎಕರೆ ಭೂಮಿ ತಲಕಾವೇರಿ ವ್ಯಾಪ್ತಿಗೆ ಬರುತ್ತದೆ ಎಂದರು.
ಚೆಯ್ಯಂಡ ಸತ್ಯ ಅವರು ಮಾತನಾಡಿ, ಮೂಲ ನಿವಾಸಿಗಳಿಗೆ ಯಾವುದೇ ರೀತಿ ಧಕ್ಕೆಯಾಗಬಾರದು. ಭಾಗಮಂಡಲದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ, ಭಾಗಮಂಡಲದಿಂದ ತಲಕಾವೇರಿಗೆ ಸರ್ಕಾರಿ ಬಸ್‍ನಲ್ಲಿ ಹೋಗಿ-ಬರಲು ವ್ಯವಸ್ಥೆ ಮಾಡಬೇಕು. ಜೊತೆಗೆ ತಲಕಾವೇರಿಯಲ್ಲಿ ಪೂಜಾ ಸಮಯವನ್ನು ನಿಗದಿ ಮಾಡಬೇಕು. ಪ್ಲಾಸ್ಟಿಕ್ ನಿಷೇಧ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಹೋಟೆಲ್ ಅಸೋಷಿಯೇಷನ್‍ನ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಅದೇ ರೀತಿ ಧಾರ್ಮಿಕ ಕ್ಷೇತ್ರಗಳನ್ನು ಧಾರ್ಮಿಕ ಕ್ಷೇತ್ರಗಳನ್ನಾಗಿಯೇ ಉಳಿಸಬೇಕು ಎಂದು ತಿಳಿಸಿದರು.
ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಮಾಜಿ ಕಾರ್ಯದರ್ಶಿ ಜಿ.ರಾಜೇಂದ್ರ ಅವರು ಮಾತನಾಡಿ, ಭಾಗಮಂಡಲ, ತಲಕಾವೇರಿ ದೇವಾಲಯ ವ್ಯವಸ್ಥಾಪನಾ ನೂತನ ಸಮಿತಿ ಅಸ್ತಿತ್ವ ಬರಬೇಕು ಎಂದು ಒತ್ತಾಯಿಸಿದರು.
ಅಲ್ಲಿನ ಆಡಳಿತಾಧಿಕಾರಿ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ದೇವಾಲಯ ವ್ಯವಸ್ಥಾಪನಾ ಸಮಿತಿ ಇದ್ದರೆ ಇನ್ನಷ್ಟು ಕೆಲಸ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಲಕಾವೇರಿ, ಭಾಗಮಂಡಲ ಮತ್ತು ಪಾಡಿ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಭದ್ರತೆ ಹೆಚ್ಚಿಸಬೇಕು. ಜೀವ ನದಿ ಕಾವೇರಿ ಮಾತೆ ಬೆಂಗಳೂರು ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರು ಒದಗಿಸುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಜಿಲ್ಲಾ ಮಟ್ಟದ ಸಮಿತಿ ಅಗತ್ಯ: ತಲಕಾವೇರಿ-ಭಾಗಮಂಡಲ ದೇವಾಲಯದಲ್ಲಿ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಹಾಗೂ ಭಕ್ತಾಧಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ‘ಜಿಲ್ಲಾ ಮಟ್ಟದ ಸಮಿತಿ ರಚನೆ’ಯಾಗಬೇಕು. ತಪಸ್ಸಿನಂತೆ ಕೆಲಸ ಮಾಡುವವರನ್ನು ಸಮಿತಿಗೆ ಸೇರ್ಪಡೆ ಮಾಡಬೇಕು ಎಂದು ಜಿ.ರಾಜೇಂದ್ರ ಅವರು ಸಲಹೆ ಮಾಡಿದರು.
ವಕೀಲರಾದ ರತನ್ ತಮ್ಮಯ್ಯ,ಪವನ್ ಪೆಮ್ಮಯ್ಯ ಅವರು ಮಾತನಾಡಿ, ತಲಕಾವೇರಿ-ಭಾಗಮಂಡಲ ‘ಟೆಂಪಲ್ ಸಿಟಿ’ ಆದಲ್ಲಿ ಮಾತ್ರ ಅಲ್ಲಿ ಶಾಂತಿ ನೆಮ್ಮದಿಗೆ ಸಹಕಾರಿಯಾಗಲಿದೆ. ಆದ್ದರಿಂದ ಪ್ರವಾಸಿ ಸ್ಥಳದಿಂದ ಈ ಕ್ಷೇತ್ರಗಳನ್ನು ತೆಗೆಯಬೇಕು ಎಂದರು.ಈ ಸಂಬಂಧ ಸ್ಥಳೀಯರ ವಿಶ್ವಾಸ ಪಡೆಯಬೇಕು. ಪ್ರವಾಸಿಗರಿಗೆ ಮಾಂದಲ್ ಪಟ್ಟಿಯೂ ಒಂದೇ, ಪುಣ್ಯಕ್ಷೇತ್ರ ತಲಕಾವೇರಿಯೂ ಒಂದೇ ಎಂಬ ಭಾವನೆ ಇದೆ. ಆದ್ದರಿಂದ ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಬೇಕು ಎಂದು ನುಡಿದರು.
ಮಂಜು ಚಿಣ್ಣಪ್ಪ, ಡಾಟಿ ಪೂವಯ್ಯ, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ರಾಜೀವ್ ಬೋಪಯ್ಯ, ಮಾಚಿಮಾಡ ರವೀಂದ್ರ,ಮಾದೇಟಿರ ಬೆಳ್ಯಪ್ಪ, ಸೋಮಯ್ಯ, ಸುನಿಲ್, ಮೋಂತಿ ಗಣೇಶ್, ಹರೀಶ್ ಮಾದಪ್ಪ ಅವರುಗಳು ಮದ್ಯದಂಗಡಿ, ವೈನ್ ಶಾಪ್’ಗಳ ಸ್ಥಳಾಂತರ,ಪ್ರವಾಸಿ ಕ್ಷೇತ್ರಗಳ ಪಟ್ಟಿಯಿಂದ ಈ‌ ಕ್ಷೇತ್ರಗಳನ್ನು ಕೈಬಿಡಬೇಕು ಮುಂತಾದ ವಿಚಾರಗಳ ಬಗ್ಗೆ ಗಮನ ಸೆಳೆದರು.
ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್, ಭಾಗಮಂಡಲ-ತಲಕಾವೇರಿ ದೇವಾಲಯದ ಇಒ ಕೃಷ್ಣಪ್ಪ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!