ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸುವ ಆಘಾತಕಾರಿ ಅಕ್ರಮವೊಂದು ಬೆಳಕಿಗೆ ಬಂದಿದೆ. ಭಾರತದ ನಾಗರಿಕರಲ್ಲದ, ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಹಲವು ವ್ಯಕ್ತಿಗಳು ಇತ್ತೀಚಿನ ಚುನಾವಣೆಯಲ್ಲಿ ಅಕ್ರಮವಾಗಿ ಮತ ಚಲಾಯಿಸಿರುವುದು ಪತ್ತೆಯಾಗಿದ್ದು, ಚೆನ್ನೈ ಮತ್ತು ಮದುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ವಿದೇಶಗಳಿಗೆ ಹಾರಲು ಸಜ್ಜಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ದಾಖಲೆಗಳನ್ನು ಪರಿಶೀಲಿಸುವಾಗ ಅಧಿಕಾರಿಗಳಿಗೆ ತೀವ್ರ ಅನುಮಾನ ಮೂಡಿದೆ. ಪ್ರಯಾಣಿಕರ ತೋರು ಬೆರಳಿನಲ್ಲಿ ಮತದಾನದ ಗುರುತಾದ ಅಳಿಸಲಾಗದ ಮಸಿ ಇರುವುದನ್ನು ಕಸ್ಟಮ್ಸ್ ಮತ್ತು ಇಮಿಗ್ರೇಷನ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ತಪಾಸಣೆ ನಡೆಸಿದಾಗ, ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದ ಇವರ ಬಳಿ ಭಾರತೀಯ ಚುನಾವಣಾ ಆಯೋಗ ನೀಡಿರುವ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ.
ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದವರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದಾರೆ. ಚೆನ್ನೈನಲ್ಲಿ ಸದ್ಯಕ್ಕೆ ಕನಿಷ್ಠ 10 ಜನರನ್ನು ಬಂಧಿಸಲಾಗಿದ್ದು, ಇವರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ. ಬಂಧಿತ ಶ್ರೀಲಂಕಾ ಪ್ರಜೆಗಳನ್ನು ರಂಜಿನಿ (59), ಸರ್ಫುದೀನ್ (68), ನಿಲಾಂತಿ (44), ಜಯಂತನ್ (40), ಚಾರ್ಲಿ ಬಾಲಚಂದ್ರನ್ (48), ಚಕ್ರವರ್ತಿ ಲೋಗಪ್ರಿಯಾ (50) ಮತ್ತು ಸುನಿತಾ ಚಕ್ರವರ್ತಿ (48) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಬ್ರಿಟನ್ ಮೂಲದ ಅಯ್ಯಾದುರೈ (53), ಇಂಡೋನೇಷ್ಯಾದ ಟಿಟ್ಟಿನ್ ಮರಿಯಟ್ಟಿ (47) ಹಾಗೂ ಕೆನಡಾ ಪೌರತ್ವ ಹೊಂದಿರುವ ಜಿತ್ತೇಂದ್ರನಾಥ್ (38) ಎಂಬುವವರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಭಾರತೀಯ ಸಂವಿಧಾನ ಮತ್ತು ಚುನಾವಣಾ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ವಿದೇಶಿ ಪೌರತ್ವ ಅಥವಾ ಪಾಸ್‌ಪೋರ್ಟ್ ಹೊಂದಿದ್ದರೆ ಅವರು ಭಾರತದಲ್ಲಿ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಕೇವಲ ಅನಿವಾಸಿ ಭಾರತೀಯರು ಮಾತ್ರ ಭಾರತೀಯ ಪಾಸ್‌ಪೋರ್ಟ್ ಬಳಸಿ ವೋಟ್ ಮಾಡಬಹುದು. ಹೀಗಿರುವಾಗ ಈ ವಿದೇಶಿ ನಾಗರಿಕರು ಭಾರತದ ವೋಟರ್ ಐಡಿಯನ್ನು ಹೇಗೆ ಪಡೆದುಕೊಂಡರು? ಮತ್ತು ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸಿದರು? ಎಂಬ ಬಗ್ಗೆ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿವೆ.



