ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ಗೆಳೆಯನೊಬ್ಬ ಉಡುಗೊರೆ ಕಳುಹಿಸುವ ನೆಪದಲ್ಲಿ ಬೆಂಗಳೂರಿನ ವಿಚ್ಛೇದಿತ ಮಹಿಳೆಯೊಬ್ಬರಿಗೆ ಬರೋಬ್ಬರಿ 1.7 ಕೋಟಿ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ಬೆಳಕಿಗೆ ಬಂದಿದೆ.
ಫೇಸ್‌ಬುಕ್‌ನಲ್ಲಿ ಶುರುವಾದ ಸ್ನೇಹ:
ಬೆಂಗಳೂರಿನ ಯಶವಂತಪುರ ನಿವಾಸಿಯಾದ ವಿಚ್ಛೇದಿತ ಮಹಿಳೆಗೆ ಕೆಲವು ತಿಂಗಳುಗಳ ಹಿಂದೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ತಾನು ಯುಕೆಯಲ್ಲಿ (UK) ಪ್ರತಿಷ್ಠಿತ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ ಆತ, ಮಹಿಳೆಯೊಂದಿಗೆ ಅತ್ಯಂತ ಆಪ್ತವಾಗಿ ಮಾತನಾಡುತ್ತಾ ನಂಬಿಕೆ ಗಳಿಸಿದ್ದನು.
ಗಿಫ್ಟ್ ನೆಪದಲ್ಲಿ ಹೂಡಿದ ಸೈಬರ್ ಜಾಲ:
ಕೆಲ ದಿನಗಳ ನಂತರ ಆರೋಪಿಯು ಮಹಿಳೆಗೆ ಬೆಲೆಬಾಳುವ ವಿದೇಶಿ ಸೀರೆಗಳು, ವಜ್ರಾಭರಣಗಳು ಹಾಗೂ ಐಫೋನ್ ಸೇರಿದಂತೆ ಹತ್ತಾರು ದುಬಾರಿ ಉಡುಗೊರೆಗಳನ್ನು ಕಳುಹಿಸಿಕೊಟ್ಟಿರುವುದಾಗಿ ನಂಬಿಸಿದ್ದನು. ಅದಾದ ಕೆಲವೇ ದಿನಗಳಲ್ಲಿ ಮಹಿಳೆಗೆ ದೆಹಲಿಯ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, “ನಿಮ್ಮ ಹೆಸರಿಗೆ ವಿದೇಶದಿಂದ ಭಾರಿ ಮೌಲ್ಯದ ಪಾರ್ಸೆಲ್ ಬಂದಿದೆ. ಅದರಲ್ಲಿ ಚಿನ್ನ ಮತ್ತು ಕೋಟ್ಯಂತರ ರೂ. ಮೌಲ್ಯದ ವಿದೇಶಿ ಕರೆನ್ಸಿ ಇದೆ. ಅದನ್ನು ಬಿಡಿಸಿಕೊಳ್ಳಲು ಕಸ್ಟಮ್ಸ್ ಸುಂಕ ಪಾವತಿಸಬೇಕು” ಎಂದು ಹೆದರಿಸಿದ್ದರು.
ಇದೇ ವೇಳೆ ಆ ನಕಲಿ ಫೇಸ್‌ಬುಕ್ ಗೆಳೆಯ ಕೂಡ ಮಹಿಳೆಗೆ ಕರೆ ಮಾಡಿ, “ನಾನು ಕಳುಹಿಸಿದ ಗಿಫ್ಟ್‌ಗಳು ದೆಹಲಿ ಕಸ್ಟಮ್ಸ್‌ನಲ್ಲಿ ಸಿಲುಕಿಕೊಂಡಿವೆ. ನನ್ನ ಬಳಿ ಸದ್ಯಕ್ಕೆ ಇಂಡಿಯನ್ ಕರೆನ್ಸಿ ಇಲ್ಲ. ನೀನು ಸದ್ಯಕ್ಕೆ ಹಣ ಪಾವತಿಸಿ ಆ ಪಾರ್ಸೆಲ್ ಬಿಡಿಸಿಕೊಡು. ನಾನು ಭಾರತಕ್ಕೆ ಬಂದ ತಕ್ಷಣ ನಿನ್ನ ಸಂಪೂರ್ಣ ಹಣವನ್ನು ಹಿಂತಿರುಗಿಸುತ್ತೇನೆ” ಎಂದು ನಂಬಿಸಿದ್ದನು.
ಇದನ್ನೂ ಓದಿ;
ಕೋಟ್ಯಂತರ ರೂ. ಕಳೆದುಕೊಂಡ ಸಂತ್ರಸ್ತೆ:
ಗೆಳೆಯನ ಮಾತನ್ನು ನಿಜವೆಂದು ನಂಬಿದ ಮಹಿಳೆ, ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಬರೋಬ್ಬರಿ 1.7 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಹಣ ಜಮೆಯಾದ ನಂತರವೂ ವಂಚಕರು ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ ಮತ್ತು ಆ ಫೇಸ್‌ಬುಕ್ ಗೆಳೆಯನ ಫೋನ್ ಸ್ವಿಚ್ ಆಫ್ ಆದಾಗ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಾಗಿದೆ.
ತಕ್ಷಣವೇ ಸಂತ್ರಸ್ತೆ ಬೆಂಗಳೂರಿನ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆ ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆಗಳು ಹಾಗೂ ಇಂಟರ್ನೆಟ್ ಕರೆಗಳ ಆಧಾರದ ಮೇಲೆ ಸೈಬರ್ ಖದೀಮರಿಗಾಗಿ ಬಲೆ ಬೀಸಿದ್ದಾರೆ.



