ಎತ್ತಿನಹೊಳೆ ಯೋಜನೆಗೆ ಅರಣ್ಯ ಅನುಮತಿ ಪ್ರಸ್ತಾವನೆ: ಸ್ಪಷ್ಟೀಕರಣ ಕೇಳಿದ ಕೇಂದ್ರ

ಹೊಸದಿಗಂತ ವರದಿ ಬೆಂಗಳೂರು:

ಸಕಲೇಶಪುರದಲ್ಲಿ ಎತ್ತಿನಹೊಳೆ ಯೋಜನೆಯ ಮೊದಲ ಹಂತ ಏತ ಕಾಮಗಾರಿಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ. ಈ ಮಧ್ಯೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ರಾಜ್ಯ ಸರ್ಕಾರಕ್ಕೆ ಅನೇಕ ಸ್ಪಷ್ಟೀಕರಣ ಕೇಳಿದೆ. ತಿಂಗಳ ಹಿಂದೆಯೇ ಈ ಪತ್ರ ಬರೆಯಲಾಗಿದೆ.

ಎತ್ತಿನಹೊಳೆ ಯೋಜನೆಯ ಪೂರ್ಣ ಅನುಷ್ಠಾನಕ್ಕೆ ಅರಣ್ಯಭೂಮಿ ಅಡ್ಡಿಯಾಗಿದೆ ಎಂದು ಹೇಳುತ್ತಲೇ ಇದೆ. ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 10.1301 ಹೆಕ್ಟೇರು ಅರಣ್ಯ ಭೂಮಿ ಅರಣ್ಯೇತರವಾಗಿ ಪರಿವರ್ತಿಸಲು ಅನುಮತಿ ಕೋರಿ ಈ ವರ್ಷ ಜೂ.19ರಂದು ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ತ್ವರಿತ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ಆ.7ರಂದು ಪತ್ರ ಬರೆದಿರುವ ಸಚಿವಾಲಯವು ಒಟ್ಟು 12 ಅಂಶಗಳಿಗೆ ಸ್ಪಷ್ಟೀಕರಣ ಮತ್ತು ಹೆಚ್ಚುವರಿ ಮಾಹಿತಿ ಒದಗಿಸುವಂತೆ ತಿಳಿಸಿದೆ.

ಅರಣ್ಯ ಭೂಮಿಗೆ ಏಕೀಕೃತ ಪ್ರಸ್ತಾವನೆ ಕಳುಹಿಸಿ
ವಿಸ್ತೃತ ಯೋಜನಾ ವರದಿ (ಡಿಪಿಆರ್)ಯಲ್ಲಿ ಎತ್ತಿನಹೊಳೆ ಯೋಜನೆಗೆ 1200ಹೆ. ಪ್ರದೇಶ ಬೇಕು, ಅದರಲ್ಲಿ ಶೇ.50 ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ತ್ವರಿತ ಪ್ರಸ್ತಾವನೆ ಹೆಸರಿನಲ್ಲಿ ತುಂಡು ತುಂಡು ರೀತಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿದೆ. ಆದ್ದರಿಂದ ಹೆಚ್ಚಿನ ಭೂಮಿಯ ಅಗತ್ಯವಿದ್ದರೆ ರಾಜ್ಯ ಸರ್ಕಾರವು ತುಂಡು ರೀತಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸುವ ಬದಲು ಏಕೀಕೃತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಕೇಂದ್ರ ಸೂಚಿಸಿದೆ.

ಹೆಚ್ಚುವರಿ ಭೂಮಿ ಬಳಕೆ?
ಯೋಜನೆಯ ಅನುಷ್ಠಾನಕ್ಕಾಗಿ 2016ರಲ್ಲಿ ಸಕಲೇಶಪುರ ತಾಲೂಕಿನಲ್ಲಿ 13.93 ಹೆ. ಅರಣ್ಯ ಭೂಮಿ ಪರಿವರ್ತಿಸಲು ಆಗಿನ ಯೋಜನಾ ಅನುಷ್ಠಾನ ಸಂಸ್ಥೆ ಕರ್ನಾಟಕ ನೀರಾವರಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಬಳಿಕ 2019ರ ನ.13ರಂದು ರಾಜ್ಯ ಸರ್ಕಾರವು ಎರಡನೇ ಹಂತದ ಅರಣ್ಯ ಅನುಮತಿಯ ಮಾರ್ಪಾಡಿಗೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಅರಣ್ಯ ಮಂತ್ರಾಲಯವು ಉಪಗ್ರಹ ಚಿತ್ರದ ಮೂಲಕ ಪ್ರಸ್ತಾವನೆ ವಿಶ್ಲೇಷಿಸಿದ ನಂತರ ರಾಜ್ಯ ಸರ್ಕಾರಕ್ಕೆ ನ.27ರಂದು ಪತ್ರ ಬರೆದು ಯೋಜನೆಗೆ ಅನುಮೋದಿತ ಪ್ರದೇಶಗಳ ಹೊರಗಿನ ಅರಣ್ಯ ಪ್ರದೇಶ ಬಳಸಿಕೊಂಡಿದೆ. ಆದ್ದರಿಂದ ಸಂಪೂರ್ಣ ಯೋಜನೆಗೆ ಅನುಮೋದಿಸಲಾದ ಅರಣ್ಯ ಪ್ರದೇಶವನ್ನು ಮರು ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಈವರೆಗೆ ರಾಜ್ಯ ಸರ್ಕಾರ ಇದಕ್ಕೆ ಉತ್ತರಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಸರ್ಕಾರ ತತ್‌ಕ್ಷಣದ ಪ್ರಸ್ತಾವನೆ (10.1301 ಹೆ.) ಕುರಿತು ಸ್ಪಷ್ಟೀಕರಣ ನೀಡಬೇಕು. ಈ ಅರಣ್ಯ ಭೂಮಿ ಹಿಂದಿನ ಎತ್ತಿನಹೊಳೆ ಯೋಜನೆಯೊಂದಿಗೆ ಜೋಡಣೆಯಾಗಿದ್ದರೆ, ತುಂಡು ಪ್ರಸ್ತಾವನೆಗಳನ್ನು ಸಲ್ಲಿಸಲು ಕಾರಣವೇನೆಂದು ಸಮರ್ಥನೆಯನ್ನೂ ಸಲ್ಲಿಸುವಂತೆ ಕೇಂದ್ರ ನಿರ್ದೇಶಿಸಿದೆ.

ಕಾರ್ಯಸಾಧ್ಯತಾ ವರದಿ ಸಲ್ಲಿಕೆಗೆ ಸೂಚನೆ
2022ರಲ್ಲಿ ಡೌನ್ ಟು ಅರ್ಥ್ ವರದಿಯು, 22 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ನಲ್ಲಿ ಒಂದು ಹನಿ ನೀರೂ ಹರಿದಿಲ್ಲ. ಯೋಜನೆಯ ಅನುಷ್ಠಾನವು ಭಾರಿ ಭೂಕುಸಿತಕ್ಕೆ ಕಾರಣವಾಗಿದೆ. ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆಯು ಗುರಿ ಸಾಧಿಸದೇ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳನ್ನು ನಾಶಪಡಿಸಿದೆ ಎಂದು ಉಲ್ಲೇಖಿಸಿದೆ. ಆದ್ದರಿಂದ ಈ ಬಗ್ಗೆ ವಾಸ್ತವಿಕ ವರದಿ ಹಾಗೂ ಸಂಪೂರ್ಣ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ಕೇಂದ್ರದ ಇತರ ಸೂಚನೆಗಳು
* 2016 ಸೆ.15ರಂದು ಸಕಲೇಶಪುರದ 13.93 ಹೆ. ಅರಣ್ಯ ಅನುಮತಿ ಹಂತ 2ರ ಸಂಪೂರ್ಣ ಅನುಸರಣಾ ವರದಿ ಸಲ್ಲಿಸಬೇಕು.
* ತ್ವರಿತ ಪ್ರಸ್ತಾವನೆ (10.1301 ಹೆ.)ಯ ಕೀಹೋಲ್ ಮಾರ್ಕ್‌ಅಪ್ ಲ್ಯಾಂಗ್ವೇಜ್ (ಕೆಎಂಎಲ್) ಫೈಲ್ ವಿಶ್ಲೇಷಿಸಿದಾಗ, ಅರಣ್ಯೇತರ ಭೂಮಿಯಲ್ಲಿ ಯೋಜನೆಯ ಯಾವುದೇ ಇತರ ಘಟಕಗಳಿವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.
* ರಾಜ್ಯ ಸರ್ಕಾರ ಗುರುತಿಸಿದ ಪರಿಹಾರ ಅರಣ್ಯೀಕರಣ ಜಮೀನಿನ ಪ್ರದೇಶ ಸೂಕ್ತತೆಯ ಪ್ರಮಾಣಪತ್ರ ಸಲ್ಲಿಸಬೇಕು.
* ಪರಿಹಾರ ಅರಣ್ಯೀಕರಣ ಭೂಮಿಯನ್ನು ಉಲ್ಲೇಖಿಸಿ ಪರಿಹಾರ ಅರಣ್ಯೀಕರಣ ಯೋಜನೆ ಸಲ್ಲಿಸಬೇಕು.
* ತ್ವರಿತ ಪ್ರಸ್ತಾವನೆಯನ್ನು ಉಲ್ಲೇಖಿಸಿ ಪ್ರಾಜೆಕ್ಟ್ ಸ್ಕ್ರೀನಿಂಗ್ ಕಮಿಟಿಯ (ಪಿಎಸ್‌ಸಿ) ಶಿಫಾರಸನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!