ಜನರ ನಿದ್ದೆಗೆಡಿಸಿದ ಕಾಡಾನೆ ಸೆರೆಗೆ ಸಾಕಾನೆಗಳ ಮೊರೆ ಹೋದ ಅರಣ್ಯ ಇಲಾಖೆ

ಹೊಸದಿಗಂತ ವರದಿ ದಾವಣಗೆರೆ: 

ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಬಾಲಕಿಯನ್ನು ಬಲಿ ಪಡೆದು ಜನರ ನಿದ್ದೆಗೆಡಿಸಿದ ಕಾಡಾನೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ಮೊರೆ ಹೋಗಿದ್ದು, ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಿಂದ ಆನೆಗಳನ್ನು ಕರೆ ತರಲಾಗಿದೆ.

ಸಸ್ಯ ಶಾಂತಿಸಾಗರ ಕೆರೆ ಹಿನ್ನೀರಿನ ಪ್ರದೇಶದಲ್ಲಿರುವ ಗಂಡು ಕಾಡಾನೆಯನ್ನು ಅರಣ್ಯ ಪ್ರದೇಶದತ್ತ ಓಡಿಸಿ, ಸಾಕು ಆನೆಗಳ ನೆರವಿನಿಂದ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಇಲಾಖೆ ಸಿದ್ಧತೆ ನಡೆಸಲಾಗಿದೆ.

ಅರಸೀಕೆರೆ, ಶಿವನಿ, ಹೊಳಲ್ಕೆರೆ ಮಾರ್ಗವಾಗಿ ಚನ್ನಗಿರಿ ತಾಲ್ಲೂಕು ಪ್ರವೇಶಿಸಿ ಶಾಂತಿಸಾಗರದತ್ತ ಬಂದಿರುವ ಈ ಸಲಗ, ಶನಿವಾರ ಮೂರು ಬಾರಿ ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿ ದಾಟಲು ಪ್ರಯತ್ನಿಸಿದೆ. ಆದರೆ, ಅಲ್ಲಿನ ವಾಹನ ಸಂಚಾರ ಹಾಗೂ ಜನದಟ್ಟಣೆಯಿಂದ ಬೆದರಿ ಮತ್ತೆ ಕೆರೆ ಪ್ರದೇಶದತ್ತ ಮರಳಿದೆ. ಹೀಗಾಗಿ ಅದನ್ನು ಅಲ್ಲಿಂದ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ದಾವಣಗೆರೆ, ಚನ್ನಗಿರಿ, ಭದ್ರಾವತಿ, ಶಂಕರಘಟ್ಟ, ಆಯನೂರು, ಉಂಬ್ಳೆಬೈಲು, ಹೊಳಲ್ಕೆರೆ ಅರಣ್ಯ ವಲಯದ 150ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಆನೆಯ ಸೆರೆಗೆ ಬೆಂಗಳೂರಿನಿಂದ ಡ್ರೋಣ್ ತಂಡ ಬರಲಿದೆ. ಬೆಂಗಳೂರು, ನಾಗರಹೊಳೆ, ಮೈಸೂರು ಹಾಗೂ ಸಕ್ರೆಬೈಲಿನಿಂದ ವೈದ್ಯರ ತಂಡ ಆಗಮಿಸುತ್ತಿದೆ.

ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಆನೆ ಬೀಡುಬಿಟ್ಟಿರುವುದರಿಂದ ಜನರ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ಸುತ್ತಲಿನ ಗ್ರಾಮಗಳಲ್ಲಿ ಡಂಗುರ ಹೊಡೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಆನೆಗೆ ತೊಂದರೆ ಕೊಡದಂತೆ, ಗಾಬರಿ ಆಗದಂತೆ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸಹಕರಿಸಲು ಗ್ರಾಮಸ್ಥರನ್ನು ಕೋರಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!