ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಅರಣ್ಯ ಇಲಾಖೆಯು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ರಾಜ್ಯದಲ್ಲಿರುವ ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿರುವ ಹಳೆಯ ನೀಲಗಿರಿ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ರಾಣೆಬೆನೂರು ಕೃಷ್ಣಮೃಗ ಅಭಯಾರಣ್ಯ ಸೇರಿದಂತೆ ಕೆಲವು ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶಗಳಲ್ಲಿ ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭಿಸಲಾಗಿದೆ, ಈಗ ಇದನ್ನು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಇತರ ಅರಣ್ಯಗಳು ಮತ್ತು ನಗರಗಳಿಗೆ ವಿಸ್ತರಿಸಲಾಗುವುದು. ನೀಲಗಿರಿ ಮರಗಳನ್ನುಕತ್ತರಿಸುವುದು ಪ್ರತಿ ಅರಣ್ಯ ವಿಭಾಗದ ಕಾರ್ಯಯೋಜನೆಯ ಭಾಗವಾಗಿದೆ. ಇದರಿಂದ ನೈಸರ್ಗಿಕ ಸಸ್ಯವರ್ಗವನ್ನು ಸುಧಾರಿಸುವುದು ಮತ್ತು ಸ್ಥಳೀಯ ಪ್ರಭೇದಗಳಿಗೆ ದಾರಿ ಮಾಡಿಕೊಡಲಾಗುತ್ತದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮತ್ತು ಅದರ ಸುತ್ತಮುತ್ತಲು ಸುಮಾರು 75 ಎಕರೆಗಳನ್ನು ಗುರುತಿಸಲಾಗಿದೆ. ತುರಹಳ್ಳಿ ಕಿರು ಅರಣ್ಯ ಸೇರಿದಂತೆ ಅರಣ್ಯ ಪ್ರದೇಶದಲ್ಲಿರುವ ಹಳೆಯ ನೀಲಗಿರಿ ಮರಗಳನ್ನು ತೆರವುಗೊಳಿಸಲಾಗುವುದು. ಈ ನಿರ್ಧಾರವನ್ನು ರಾಜ್ಯದ ಹಸಿರು ಹೊದಿಕೆಯ ಭಾಗವೆಂದು ಉಲ್ಲೇಖಿಸಿ ಕೆಲವು ಕಾರ್ಯಕರ್ತರು ವಿರೋಧಿಸಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸೇನಾ ಸ್ಮಾರಕಕ್ಕಾಗಿ ನೀಲಗಿರಿ ಮರಗಳನ್ನುಕತ್ತರಿಸಲು ಅರಣ್ಯ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ ಕೈಗೊಂಡಾಗ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು ಎನ್ನಲಾಗಿದೆ.