ಶಾಲೆಗಳ ಸನಿಹದಲ್ಲೇ ಕಾಡಾನೆಗಳ ಓಡಾಟ: ಗ್ರಾಮಸ್ಥರ ಆತಂಕ

ಹೊಸದಿಗಂತ ವರದಿ, ಮಡಿಕೇರಿ:
ಸಿದ್ದಾಪುರ ಸಮೀಪದ ಅಭ್ಯತ್ ಮಂಗಲ ಮತ್ತು ನೆಲ್ಯಹುದಿಕೇರಿ ಭಾಗದಲ್ಲಿ ಶಾಲೆಗಳ ಬಳಿಯಲ್ಲೇ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.
ಅಭ್ಯತ್’ಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಟಾಟಾ ಕಾಫಿ ತೋಟದಲ್ಲಿ ಕಾಲಿನ ಭಾಗದಲ್ಲಿ ಗಾಯಗಳಾಗಿರುವ ಒಂಟಿ ಸಲಗವೊಂದು ಓಡಾಡುತ್ತಿದೆ. ಇತ್ತೀಚೆಗೆ ಎಂ.ಜಿ. ಕಾಲೋನಿಯಲ್ಲಿ ಓಡಾಡಿದ್ದು ಇದೇ ಆನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅರಣ್ಯ ಇಲಾಖೆ ತಕ್ಷಣ ಇದನ್ನು ಸೆರೆ ಹಿಡಿದು ಸೂಕ್ತ ಚಿಕಿತ್ಸೆ ನೀಡಿ ಸಾಕಾನೆ ಶಿಬಿರಕ್ಕೆ ಸೇರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ನೆಲ್ಯಹುದಿಕೇರಿ ಶಾಲೆ ಬಳಿಯ ನಿವಾಸಿ ಬಾಲು ಎಂಬುವರ ಮನೆಯಾವರಣಕ್ಕೆ ನುಗ್ಗಿದ ಕಾಡಾನೆಯೊಂದು ತೆಂಗು, ಕಾಫಿ ಸೇರಿದಂತೆ ವಿವಿಧ ಸಸಿಗಳನ್ನು ನಾಶ ಮಾಡಿದೆ.
ಶಾಲೆಗಳ ಸಮೀಪದಲ್ಲೇ ಕಾಡಾನೆಗಳು ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ಅಭ್ಯತ್ ಮಂಗಲ ಮತ್ತು ನೆಲ್ಯಹುದಿಕೇರಿ ಭಾಗದ ಬೆಳೆಗಾರರು ವನ್ಯಜೀವಿಯ ದಾಳಿಯಿಂದ ನಿತ್ಯ ನಷ್ಟ ಅನುಭವಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!