ಕೊಡವರ ಬೇಡಿಕೆ ಈಡೇರಿಕೆಗೆ ಆಯೋಗ ರಚನೆ: ಹೈಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ರಾಜ್ಯದ ಭಾಗವಾಗಿರುವ ಕೊಡಗು ಜಿಲ್ಲೆಗೆ ಸಂವಿಧಾನಾತ್ಮಕವಾಗಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಕೊಡವರನ್ನು ಎಸ್‍ಟಿ ಪಟ್ಟಿಗೆ ಸೇರಿಸುವುದು ಮತ್ತು ಕೊಡವ ನ್ಯಾಷನಲ್ ಕೌನ್ಸಿಲ್’ನ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಯೋಗವೊಂದನ್ನು ರಚನೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದೆ.
ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ವಕೀಲ ಸತ್ಯ ಸಬರ್ವಾಲ್ ಅವರ ಮೂಲಕ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಅವರ ಪೀಠದ ಮುಂದೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಕೊಡವರ ಸ್ಥಿತಿಗತಿಯ ಕುರಿತು ವಿವರಿಸಲಾಗಿದೆ. ಅರ್ಜಿ ಸ್ವೀಕರಿಸಿದ ನ್ಯಾಯಪೀಠ ಏ.17ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಲ್ಪಡುವ ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಲ್ಪಡುವ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಕೊಡವ ನ್ಯಾಷನಲ್ ಕೌನ್ಸಿಲ್’ನ್ನು ಪ್ರತಿನಿಧಿಸಲ್ಪಡುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.
ರಾಜ್ಯ ಮರುಸಂಘಟನೆ ಕಾಯಿದೆ ಜಾರಿಗೆ ಬರುವ ಮೊದಲು ಕೊಡವ ಜನಾಂಗವು 1956ರವರೆಗೆ ತನ್ನದೇ ಆದ ಸಣ್ಣ ರಾಜ್ಯವನ್ನು ಹೊಂದಿತ್ತು. ಕರ್ನಾಟದೊಂದಿಗೆ ವಿಲೀನವಾದ ನಂತರ ಈ ಜನಾಂಗದ ಬೇಡಿಕೆಗಳನ್ನು ಆಡಳಿತ ವ್ಯವಸ್ಥೆ ನಿರ್ಲಕ್ಷಿಸುತ್ತಾ ಬಂದಿದೆ. ಭಾರತೀಯ ಸಂವಿಧಾನದ 244 ನೇ ವಿಧಿಯ ಪ್ರಕಾರ ಆರನೇ ವೇಳಾಪಟ್ಟಿಯನ್ನು ಜಾರಿಗೊಳಿಸಲಾಯಿತು. ಭಾರತದ ಸಂವಿಧಾನದ ಆರನೇ ಶೆಡ್ಯೂಲ್ ಆಯಾ ರಾಜ್ಯಗಳಲ್ಲಿ ಸ್ವಾಯತ್ತತೆಯನ್ನು ನೀಡಲಾಗಿರುವ ಸ್ವಾಯತ್ತ ಆಡಳಿತ ವಿಭಾಗಗಳ ರಚನೆಗೆ ಅವಕಾಶ ನೀಡುತ್ತದೆ.
ಈ ಸ್ವಾಯತ್ತ ಪ್ರದೇಶಗಳಲ್ಲಿ ಲಡಾಖ್‍ನಲ್ಲಿ ಎರಡು ಕೌನ್ಸಿಲ್‍ಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದನ್ನು ಹೊರತುಪಡಿಸಿವೆ. ಪ್ರಸ್ತುತ, ಅಸ್ಸಾಂ, ಮೇಘಾಲಯದಲ್ಲಿ ಹತ್ತು ಸ್ವಾಯತ್ತ ಮಂಡಳಿಗಳಿವೆ. ಆರನೇ ವೇಳಾಪಟ್ಟಿಯಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಸ್ಥಳೀಯ ಮತ್ತು ಬುಡಕಟ್ಟು ಗುಂಪುಗಳು ಗಮನಾರ್ಹ ಸ್ವಾಯತ್ತತೆಯನ್ನು ಹೊಂದಿವೆ. ಅಸ್ಸಾಂ, ಮಿಜೋರಾಂ ಮತ್ತು ಮೇಘಾಲಯಗಳು ಮೂರು ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ಹೊಂದಿದ್ದರೆ ತ್ರಿಪುರಾ ಒಂದನ್ನು ಹೊಂದಿದೆ.
ಇದೇ ಮಾದರಿಯಲ್ಲಿ ಕೊಡವ ಸಮುದಾಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ರಕ್ಷಿಸಲು, ಕೊಡವ ನ್ಯಾಷನಲ್ ಕೌನ್ಸಿಲ್’ನ ಆಕಾಂಕ್ಷೆಗಳು ಹಾಗೂ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಶೀಲಿಸಲು ಆಯೋಗವನ್ನು ರೂಪಿಸಲು ನಾಮನಿರ್ದೇಶನ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಸಂವಿಧಾನದ ವಿಧಿಯಡಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಗಾಗಿ ಆಯೋಗ ರಚನೆ ಮಾಡಬೇಕು ಅಥವಾ ಕೂರ್ಗ್’ನ 1956 ರ ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸಿ “ಸಿ” ರಾಜ್ಯದಿಂದ ಸಾಂವಿಧಾನಿಕವಾಗಿ ರೂಪಾಂತರಗೊಂಡ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
“ಸಿ” ಸ್ಟೇಟ್ಸ್ ಆಕ್ಟ್ 1952 ರ ಪ್ರಕಾರ ಕೊಡವ ತಾಯ್ನಾಡು ಕೂರ್ಗ್ ಭಾರತೀಯ ಒಕ್ಕೂಟದ ಭಾಗವಾಗಿ ಸ್ವಾವಲಂಬಿ “ಸಿ” ರಾಜ್ಯವಾಯಿತು. ಭ್ರಷ್ಟಾಚಾರ ಮುಕ್ತ, ಶಾಂತಿಯುತ, ಸಂತೃಪ್ತ ರಾಜ್ಯ ಕೂರ್ಗ್ ಆಗಿತ್ತು. 1952 ರಿಂದ 1956 ರವರೆಗೆ ಒಂದು ಸುವರ್ಣ ಯುಗದ ರಾಜ್ಯವಾಗಿ ಅಭಿವೃದ್ಧಿ ಹೊಂದುವ ಹಾದಿಯಲ್ಲಿತ್ತು. ರಾಜ್ಯ ಮರು-ಸಂಘಟನೆ ಕಾಯಿದೆ 1956 ರ ಅಡಿಯಲ್ಲಿ ವಿಶಾಲ ಮೈಸೂರಿನೊಂದಿಗೆ ಕೂರ್ಗ್ ವಿಲೀನಕ್ಕೆ ಕಾರಣವಾಯಿತು. ನಂತರ ನಮ್ಮೆಲ್ಲ ಭರವಸೆಗಳು ಹಾಗೂ ಆಕಾಂಕ್ಷೆಗಳನ್ನು ಛಿದ್ರಗೊಳಿಸಲಾಯಿತು ಎಂದು ಆರೋಪಿಸಿದರು.
ಮತ್ತೆ ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸಲು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಾಚಪ್ಪ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!