ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ ಮಟ್ಟ ಹಾಕಲು ಸರ್ಕಾರ ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದೆ.
ಇಂದು ಸಿಎಂ ಸಿದ್ದರಾಮಯ್ಯನೇತೃತ್ವದಲ್ಲಿ ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ ಕುರಿತು ಸಭೆ ನಡೆಯಿತು.
ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿ ಆಗಿದೆ. 50% ಡ್ರಗ್ಸ್ ಹಾವಳಿ ಬೆಂಗಳೂರಿನಲ್ಲೇ ಇದ್ದು, ಮಂಗಳೂರಿನಲ್ಲಿ 22% ಡ್ರಗ್ಸ್ ಹಾವಳಿ ಜಾಸ್ತಿ ಇದೆ. ಡ್ರಗ್ಸ್ ಹಾವಳಿ ತಡೆಯಲು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಸಮಿತಿ ಇದೆ. ಇದನ್ನು ಹೊರತುಪಡಿಸಿ ಮತ್ತಷ್ಟು ಪರಿಣಾಮಕಾರಿಗೆ ಡ್ರಗ್ಸ್ ವಿರುದ್ಧ ಸಮರ ಸಾರಲು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಮಿತಿಯಲ್ಲಿ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಸದಸ್ಯರಾಗಿರುತ್ತಾರೆ. ಬೆಂಗಳೂರು ಪೂರ್ವದಲ್ಲಿ ಡ್ರಗ್ಸ್ ಹಾವಳಿ ಜಾಸ್ತಿ ಇರೋ ಮಾಹಿತಿ ಬಂದಿದೆ. ಇದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಡ್ರಗ್ಸ್ ದಂಧೆ ಪೊಲೀಸರಿಗೆ ಗೊತ್ತಿಲ್ಲದೆ ನಡೆಯಲ್ಲ. ಹೀಗಾಗಿ ಇನ್ನು ಮುಂದೆ ಡಿವೈಎಸ್ಪಿ, ಎಸಿಪಿ, ಡಿಸಿಪಿ, ಎಸ್ಪಿಗಳಿಗೆ ಜವಾಬ್ದಾರಿ ಫಿಕ್ಸ್ ಮಾಡುವ ನಿರ್ಧಾರ ಮಾಡಿದ್ದೇವೆ. ಡ್ರಗ್ಸ್ ನಿಯಂತ್ರಣಕ್ಕೆ ಹೊಸ ಕಾನೂನು ತರಲು ಮುಂದಾಗಿದ್ದೇವೆ. ಡ್ರಗ್ಸ್ ಅಪರಾಧಕ್ಕೆ ಜಾಮೀನು ಸಿಗದಂತೆ ನಿಯಮ ಮಾಡುತ್ತೇವೆ. ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡೋದಾಗಿ ಎಚ್ಚರಿಕೆ ನೀಡಿದರು.
ಎನ್‌ಸಿಸಿ, ಎನ್‌ಎಸ್‌ಎಸ್ ಸೇರಿದಂತೆ ಸ್ಟೂಡೆಂಟ್ ಪೊಲೀಸ್ ಸಹಾಯ ಪಡೆಯುವುದು, ಎನ್‌ಜಿಓಗಳ ಸಹಕಾರ ಪಡೆಯುವ ತೀರ್ಮಾನ ಮಾಡಲಾಗಿದೆ. ಡ್ರಗ್ಸ್ ಅಪರಾಧ ಕೇಸ್ ವೇಗವಾಗಿ ಇತ್ಯರ್ಥ ಮಾಡಲು ವಿಶೇಷ ಕೋರ್ಟ್ ಸ್ಥಾಪನೆ ಮಾಡುತ್ತೇವೆ. ಇದಲ್ಲದೆ ಜಿಲ್ಲಾ ಸಮಿತಿ ಮತ್ತು ರಾಜ್ಯ ಸಮಿತಿ ಕಡ್ಡಾಯವಾಗಿ ಪ್ರತಿ ತಿಂಗಳು ಸಭೆ ಮಾಡುವಂತೆ ಆದೇಶ ಮಾಡುತ್ತೇವೆ ಎಂದು ತಿಳಿಸಿದರು.