ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಮಾಚಿದೇವ ಶ್ರೀ ಪ್ರಶಸ್ತಿ’ ಪ್ರದಾನ

ಹೊಸದಿಗಂತ ವರದಿ,ಚಿತ್ರದುರ್ಗ:

ಜಾತಿ ರಹಿತ, ವರ್ಗ ರಹಿತ ಸಮಾಜ, ಮನುಷ್ಯ ಸಮಾಜ ನಿರ್ಮಾಣ ಆಗಬೇಕು. ಧರ್ಮದ ಭಾಷೆ ಪ್ರೀತಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಪ್ರೀತಿ. ಇದನ್ನು ಪ್ರತಿಯೊಬ್ಬರೂ ತಿಳಿದು ಬದುಕಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಕಾಯಕ ಜನೋತ್ಸವ ಕಾರ್ಯಕ್ರಮದಲ್ಲಿ ’ಮಾಚಿದೇವ ಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳಿ ಹಿಂದೂತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಎಂದು ಹೇಳುವುದು ಎಷ್ಟು ಸರಿ. ನಾನು ಜಾತಿ ವ್ಯವಸ್ಥೆಗೆ ವಿರುದ್ದ. ಜಾತಿಗಳನ್ನು ಗುರುತಿಸಿ ಜಾತಿ ವ್ಯವಸ್ಥೆಯನ್ಮು ವಿರೋಧಿಸುವ ಮೂಲಕ ಜಾತಿಗಳನ್ನು ಕಿತ್ತೊಗೆಬೇಕಿದೆ ಎಂದರು.
ಜಾತಿ ವ್ಯವಸ್ಥೆಯ ಕಾರಣಕ್ಕೆ ನಮ್ಮಲ್ಲಿ ಆರ್ಥಿಕ ಹಾಗೂ ರಾಜಕೀಯ ಅಸಮಾನತೆ ಉಂಟಾಗಿದೆ. ದೇವರು, ಸ್ವಾಮೀಜಿಗಳು ಜಾತಿ ವ್ಯವಸ್ಥೆ ಹುಟ್ಟುಹಾಕಿಲ್ಲ. ಕೆಲವರು ಜಾತಿ ವ್ಯವಸ್ಥೆ ಹುಟ್ಟು ಹಾಕಿ, ಕಸುಬು ಮಾಡುವುದನ್ನೇ ಅವಕಾಶವಾಗಿ ಬಳಸಿಕೊಂಡು ಮೇಲು ಕೀಳು ಎಂಬುದನ್ನು ನಿರ್ಮಾಣ ಮಾಡಿ ಧಾರ್ಮಿಕ ಚೌಕಟ್ಟು ನಿರ್ಮಾಣ ಮಾಡಿದರು. ಸಮಾಜವನ್ನು ವರ್ಗೀಕರಣ ಮಾಡಿ, ಮೂರು ವರ್ಗದವರು ಮಾತ್ರ ವಿದ್ಯೆ, ಆಸ್ತಿ ಸಂಪಾದನೆ, ರಾಜಕೀಯ ಹಕ್ಕು ಪಡೆಯುವ ಅವಕಾಶ ಕಲ್ಪಸಿದರು. ಶೂದ್ರರಿಗೆ ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ದೂರಿದರು.
ನಾನು ಹಿಂದು, ನಮಗೆ ಖಾಯಿಲೆ ಬಂದರೆ ನಮ್ಮ ಜಾತಿಯ ವೈದ್ಯರೆ ಬೇಕು ಎನ್ನುತ್ತೇವೆಯೋ, ಬದುಕಿಸಲು ಯಾರಾದರೇನು ಎನ್ನುತ್ತೇವೆ. ನಂತರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಎಂದು ಹೇಳುವುದು ಎಷ್ಟು ಸರಿ. ಮಡಿವಾಳ ಸಮಾಜ ಸಣ್ಣ ಸಮಾಜ. ಇದನ್ನು ಸಾಮಾಜಿಕ ಆರ್ಥಿಕವಾಗಿ ಮೇಲೆ ತರುವ ನಿಟ್ಟಿನಲ್ಲಿ ಸ್ವಾಮೀಜಿಗಳು ಶ್ರಮಿಸಲಿ. ದೇಶದ ಸಂಪತ್ತು ಎಲ್ಲಾ ಜನರ ಸಂಪತ್ತು. ಇದರಲ್ಲಿ ಎಲ್ಲಾರಿಗೂ ಪಾಲು ಬೇಕು. ಯಾರೋ ಒಬ್ಬರಿಗೆ ಅಧಿಕಾರ ಕೊಟ್ಟು ಕೂರಿಸಿದರೆ ಹೇಗೆ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುವುದೇ ನನ್ನ ಧ್ಯೇಯ ಎಂದರು.
ಸ್ವಾತಂತ್ರ್ಯ ಬಂದಾಗ ಶೇಕಡಾ ೧೬ ರಷ್ಟು ಜನರು ಮಾತ್ರ ಶಿಕ್ಷಣ ಪಡೆದಿದ್ದರು. ಇಂದು ಶೇಕಡಾ ೭೮ ರಷ್ಟು ಜನರು ಶಿಕ್ಷಣ ಪಡೆದಿದ್ದಾರೆ. ಸಮ ಸಮಾಜ ಆಗಬೇಕು ಎಂದು ಗಾಂಧೀಜಿ, ಅಂಬೇಡ್ಕರ್, ಬುದ್ದ ಸೇರಿದಂತೆ ಮಹನೀಯರು ಹೇಳಿದ್ದಾರೆ. ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನಮ್ಮ ಸಮಾಜದ ಅಭಿವೃದ್ಧಿ ಸಾಧ್ಯ. ೮೫೦ ವರ್ಷಗಳ ಹಿಂದೆ ಬಸವಣ್ಣ ಇವ ನಮವ್ವ ಇವ ನಮ್ಮವ ಎಂದು ಹೇಳಿದರು. ಆದರೆ ಇದುವರೆಗೂ ಅನುಷ್ಠಾನ ಮಾಡಿಲ್ಲ. ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ ಮನೆ ಮಾಡಿದೆ. ಇದರ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ತಮಗೆ ದೊರೆತ ’ಮಾಚೀದೇವ ಶ್ರೀ ಪ್ರಶಸ್ತಿಯ ಮೊತ್ತದ ಜೊತೆಗೆ ನಾನು ಒಂದು ಲಕ್ಷ ರೂ.ಗಳನ್ನು ನೀಡುತ್ತೇನೆ. ಅದರಿಂದ ಮಠದಲ್ಲಿನ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉಪಯೋಗ ಮಾಡಿಕೊಳ್ಳುವಂತೆ ಸಿದ್ದರಾಮಯ್ಯ ಮನವಿ ಮಾಡಿದರು.
ಹಗರಿಬೊಮ್ಮಹಳ್ಳಿ ಶಾಸಕ ಭೀಮಾ ನಾಯಕರಿಗೆ ’ಮಾಚಿದೇವ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಪುರೋಷತ್ತಮಾನಂದ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಕುಂಚಿಟಿಗ ಶಾಂತವೀರ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಬಸವ ನಾಗಿದೇವ ಶ್ರೀಗಳು, ಡಾ.ಬಸವ ಮಾಚಿದೇವ ಶ್ರೀಗಳು ಸೇರಿದಂತೆ ಇತರೆ ವಿವಿಧ ಸಮುದಾಯದ ಶ್ರೀಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಗೋವಿಂದಪ್ಪ, ಉಮಾಪತಿ, ಡಿ.ಸುಧಾಕರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಯೋಗೇಶ್‌ಬಾಬು ಮತ್ತಿತರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!