Saturday, June 10, 2023

Latest Posts

ಮೇಕೆದಾಟು ಕಾಂಗ್ರೇಸ್ ಪಕ್ಷದ ರಾಜಕೀಯ ಅಜೆಂಡಾ ಅಲ್ಲ: ಸಿದ್ದರಾಮಯ್ಯ

ಹೊಸದಿಗಂತ ವರದಿ,ಚಿತ್ರದುರ್ಗ:

ಮೇಕೆದಾಟು ಕಾಂಗ್ರೇಸ್ ಪಕ್ಷದ ರಾಜಕೀಯ ಅಜೆಂಡಾ ಅಲ್ಲ. ರಾಜಕೀಯಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ. ಡಿಪಿಆರ್ ತಯಾರಾಗಿರುವ ಯೋಜನೆಯಿಂದ ಜನರಿಗೆ ನೀರು ಕೊಡಿಸಲು ಪಾದಯಾತ್ರೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಕಾಂಗ್ರೇಸ್ ಅಜೆಂಡಾ ಎಂದಿರುವ ರೈತ ಮುಖಂಡ ಕೂಡಿಹಳ್ಳಿ ಚಂದ್ರಶೇಖರ್ ಯಾರು? ನಮ್ಮದು ರಾಜಕೀಯ ಪಕ್ಷ. ಕಾಂಗ್ರೇಸ್ ಪಕ್ಷ ಸರ್ಕಾರ ನಡೆಸುತ್ತಿದ್ದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ತಯಾರಿಸಿತ್ತು. ಆದರೆ ಇದುವರೆಗೂ ಕೂಡ ಬಿಜೆಪಿ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತಂದಿಲ್ಲ. ಬಿಜೆಪಿ ಯಾವುದೇ ಯೋಜನೆ ಜಾರಿಗೆ ತರದೆ ಮಲಗಿದ್ದಾರೆ. ಅವರನ್ನು ಎಚ್ಚರಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಯಾವುದೇ ಕಾನೂನಿನ ಅಡೆತಡೆ ಇಲ್ಲ. ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ಕುಮ್ಮಕ್ಕು ನೀಡುತ್ತಾ, ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ವಿಸ್ತರಣೆ ಮಾಡಲು ಮೇಕೆದಾಟು ಯೋಜನೆ ಜಾರಿ ಮಾಡುತ್ತಿಲ್ಲ. ಆದ್ದರಿಂದ ನಮ್ಮ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಸಿದ್ದರಾಮಯ್ಯ ನಾಡಿನ ಆಸ್ತಿ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಕೋವಿಡ್ ಮುಂಜಾಗ್ರತಾ ಕ್ರಮವಹಿಸುತ್ತೇವೆ. ನಮ್ಮಿಂದ ನಿಮಗೂ, ನಿಮ್ಮಿಂದ ನಮಗೂ ಕೋವಿಡ್ ಬರದೇ ಇರಲಿ ಎಂದು ಮಾಸ್ಕ್ ಹಾಕಿದ್ದೇವೆ. ನಮಗೂ ತಿಳುವಳಿಕೆ ಇದೆ. ೧೪೪ ಸೆಕ್ಷನ್ ಹಾಕಿ ಜನರನ್ನು ಬರದಂತೆ ಮಾಡಿದರೆ, ನಾನು ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೇ ನಡೆಯುತ್ತೇವೆ ಎಂದಿದ್ದೇನೆ ಅಷ್ಟೆ ಎಂದು ಹೇಳಿದರು.
ನಳಿನ್ ಕುಮಾರ್‌ಗೆ ರಾಜಕೀಯವಾಗಿ ಬುದ್ದಿ ಬೆಳೆದಿಲ್ಲ. ಇನ್ನೂ ಅವರ ಮಾತಿಗೆ ಕಿಮ್ಮತ್ತಿರುತ್ತದೆಯೇ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ವಾಜಪೇಯಿ ಪ್ರಧಾನಿ ಆದ ಬಳಿಕ ಮತ್ತೆ ಅಧಿಕಾರಕ್ಕೆ ಬಂದವರು ನಾವು. ದೇವಸ್ಥಾನಗಳು ಮುಜರಾಯಿ ಇಲಾಖೆಯಲ್ಲಿವೆ. ಇವುಗಳನ್ನು ಆರ್‌ಎಸ್‌ಎಸ್ ಕೈಗೆ ಕೊಡಬೇಡಿ ಎಂದು ಹೇಳಿದ್ದೇವೆ. ದೇವಸ್ಥಾನಗಳನ್ನು ಆರ್‌ಎಸ್‌ಎಸ್ ನೀಡಿದರೆ ಅವರ ಮುಂದೆ ಕೈ ಮುಗಿದು ನಿಲ್ಲಬೇಕಾ ಎಂದು ಪ್ರಶ್ನಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!