ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಪ್ ಸಿಟಿ ವಸತಿ ಯೋಜನೆ ಹಗರಣದಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾಗಿರುವ ಐಎಸ್ಐ ಮಾಜಿ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಪಾಕ್ನ ಮಿಲಿಟರಿ ಬಂಧಿಸಿದೆ.
ಪಾಕಿಸ್ತಾನ ಸೇನೆ ಸೋಮವಾರ ಈ ಮಾಹಿತಿಯನ್ನು ಪ್ರಕಟಿಸಿದೆ. ಪಾಕ್ ಸುಪ್ರಿಂ ಕೋರ್ಟ್ ಆದೇಶಗಳಿಗೆ ಅನುಸಾರವಾಗಿ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಟಾಪ್ ಸಿಟಿ ವಸತಿ ಯೋಜನೆಯಲ್ಲಿ ಮಾಜಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಮಾಡಲಾದ ಆರೋಪಗಳ ನಿಖರತೆ ಪತ್ತೆ ಹಚ್ಚಲು ಪಾಕಿಸ್ತಾನ ಸೇನೆಯು ವಿವರ ವಿಚಾರಣೆ ಕೈಗೊಂಡಿದೆ ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪರಿಣಾಮವಾಗಿ, ಪಾಕಿಸ್ತಾನ ಸೇನಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಪ್ರಾರಂಭಿಸಲಾಗಿದೆ ಎಂದು ಹೇಳಿದೆ.
ನಿವೃತ್ತಿಯ ನಂತರ ಪಾಕಿಸ್ತಾನ ಸೇನಾ ಕಾಯ್ದೆಯ ಉಲ್ಲಂಘನೆಯ ಅನೇಕ ಆರೋಪಗಳು ಅವರ ಮೇಲಿವೆ. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಮತ್ತು ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಮಿಲಿಟರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಫೈಜ್ ಹಮೀದ್ ಯಾರು?
ಲೆಫ್ಟಿನೆಂಟ್ ಜನರಲ್ (ನಿವೃತ್ತ) ಹಮೀದ್ ಅವರು ಜೂನ್ 2019 ರಿಂದ ಅಕ್ಟೋಬರ್2021 ರವರೆಗೆ ಗುಪ್ತಚರ ಸಂಸ್ಥೆಯ ಮಹಾನಿರ್ದೇಶಕರಾಗಿ ನೇತೃತ್ವ ವಹಿಸಿದ್ದರು. ಈ ವೇಳೆ ಅವರು ಪ್ರಭಾವಿ ಅಧಿಕಾರಿ ಎಂದು ಪರಿಗಣಿಸಲಾಗಿತ್ತು.ಹಮೀದ್ ಅವರನ್ನು ಆಗಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತರೆಂದು ಪರಿಗಣಿಸಲಾಗಿದೆ. ಅವರು ಅವರನ್ನು ಮುಂದಿನ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲು ಬಯಸಿದ್ದರು.
ಹಕ್ಕಾನಿ ನೆಟ್ವರ್ಕ್ನ ಸಿರಾಜುದ್ದೀನ್ ಹಕ್ಕಾನಿ ಮತ್ತು ಮುಲ್ಲಾ ಯಾಕೂಬ್ ನೇತೃತ್ವದ ತಾಲಿಬಾನ್ ನಡುವಿನ ಸಂಧಾನ ನಡೆಸುವ ಮೂಲಕ ಫೈಜ್ ಹಮೀದ್ ಹೆಸರುವಾಸಿಯಾಗಿದ್ದರು.ಅವರ ಅಧಿಕಾರಾವಧಿಯಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತ್ತು.
ತಾಲಿಬಾನ್ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಹಮೀದ್ ಕಾಬೂಲ್ಗೆ ಭೇಟಿ ನೀಡಿದ್ದರು. ಅಮೆರಿಕ ತೆರಳಿದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದರು. ಐಎಸ್ಐನಲ್ಲಿ ಕೆಲಸ ಮಾಡುವ ಮೊದಲು, ಅವರು ರಾವಲ್ಪಿಂಡಿಯ ಜನರಲ್ ಆರ್ಮಿ ಪ್ರಧಾನ ಕಚೇರಿಯಲ್ಲಿ ಅಡ್ಜುಟಂಟ್ ಜನರಲ್ ಆಗಿ ಸೇವೆ ಸಲ್ಲಿಸಿದರು. ನಿವೃತ್ತರಾಗುವ ಮೊದಲು ಪೇಶಾವರ ಮತ್ತು ಬಹವಾಲ್ಪುರ ಘಟಕಗಳಲ್ಲಿ ಕಾರ್ಪ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.