ಐಸಿಸಿ ಎಲೈಟ್ ಮಾಜಿ ಅಂಪೈರ್ ಅಸದ್ ರೌಫ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2006 ರಿಂದ 2013ರ ವರೆಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ಪಾಕಿಸ್ತಾನದ ಮಾಜಿ ಅಂಪೈರ್ ಅಸದ್ ರೌಫ್, ಹೃದಯಸ್ತಂಭನದಿಂದ ಲಾಹೋರ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಈ ವಿಚಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.
ಅಸದ್ ರೌಫ್ ಅವರ ನಿಧನದ ಸುದ್ದಿ ಕೇಳಿ ನನಗೆ ದುಃಖವಾಯಿತು. ಅವರು ಕೇವಲ ಒಳ್ಳೆಯ ಅಂಪೈರ್ ಮಾತ್ರ ಆಗಿರಲಿಲ್ಲ, ಇದರ ಜತೆಗೆ ಒಳ್ಳೆಯ ಹಾಸ್ಯ ಪ್ರೌವೃತ್ತಿಯನ್ನು ಹೊಂದಿದ್ದರು. ಅವರು ನನ್ನ ಜತೆಗಿದ್ದಾಗಲೆಲ್ಲಾ, ನನ್ನ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತಿದ್ದರು. ನಾನು ಯಾವಾಗೆಲ್ಲಾ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೆನೋ ಆಗೆಲ್ಲಾ ನಗು ಬರುತ್ತಿತ್ತು. ಅವರ ನಿಧನದ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ರಮೀಜ್ ರಾಜಾ ಟ್ವೀಟ್ ಮಾಡಿದ್ದಾರೆ.
ಅಸದ್ ರೌಫ್‌ 2000ದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇನ್ನು 2005ರಲ್ಲಿ ಮೊದಲ ಬಾರಿಗೆ ಟೆಸ್ಟ್‌ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ 2006ರಿಂದ ಐಸಿಸಿ ಎಲೈಟ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ರೌಫ್, 2013ರವರೆಗೂ ಐಸಿಸಿ ಎಲೈಟ್ ಅಂಪೈರ್ ಆಗಿ ಕಾಣಿಸಿಕೊಂಡಿದ್ದರು.
ಅಸದ್ ರೌಫ್‌ 64 ಟೆಸ್ಟ್‌, 139 ಏಕದಿನ 28 ಟಿ20 ಹಾಗೂ 11 ಮಹಿಳಾ ಅಂತಾರಾಷ್ಟ್ರೀಉ ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದಷ್ಟೇ ಅಲ್ಲದೇ 40 ಪ್ರಥಮ ದರ್ಜೆ, 26 ಲಿಸ್ಟ್‌ ‘ಎ’ ಹಾಗೂ ಐಪಿಎಲ್ ಸೇರಿದಂತೆ 89 ಟಿ20 ಪಂದ್ಯಗಳಲ್ಲಿಯೂ ಅಸದ್ ರೌಫ್‌ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!